ತಮಸೋಮ ಜ್ಯೋತಿರ್ಗಮಯ . . . ಓ ಬೆಳಕೇ ನೀನೆಷ್ಟು ವಿಸ್ಮಯ...!

ಅಸತೋಮ ಸದ್ಗಮಯ ತಮಸೋಮಾ ಜ್ಯೋತಿರ್ಗಮಯ ಮೃತ್ಯೋರ್ಮ ಅಮೃತಂ ಗಮಯ ಎಂದು ಶಾಂತಿ ಮಂತ್ರದಲ್ಲಿ ನಮ್ಮ ಹಿರಿಯರು ಬೆಳಕನ್ನು ಸತ್ಯಕ್ಕೆ, ಮನುಷ್ಯ ಜೀವನದ ಅಮೃತತ್ವಕ್ಕೆ ಹೋಲಿಸಿದ್ದಾರೆ. ಈ ಬೆಳಕು ಎಂಬುದು ಎಷ್ಟು ಬೆಲೆಬಾಳುತ್ತದೆ ಎಂದೇನಾದರು ನೀವು ಸರಳವಾಗಿ ತಿಳಿಯಬೇಕೆಂದರೆ, ಒಂದು ಕ್ಷಣ ಅದು ಇಲ್ಲದಿದ್ದರೆ ಏನಾಗುತ್ತಿತ್ತು ಯೋಚಿಸಿ? ಕತ್ತಲಲ್ಲಿ ನಮ್ಮ ಹಿತ್ತಲಲ್ಲಿ ಓಡಾಡಲೂ ಹಿಂಜರಿಯುತ್ತೇವೆ ನಾವು; ಅಂತಹದ್ದರಲ್ಲಿ ವಿಶ್ವದಲ್ಲೆಲ್ಲೂ ಬೆಳಕೇ ಇಲ್ಲದಿದ್ದರೆ ಏನಾಗುತಿತ್ತು ಎಂಬುದನ್ನು ಊಹಿಸಲು ಅಥವಾ ಕಲ್ಪಿಸಲೂ ಸಾಧ್ಯವಿಲ್ಲದಷ್ಟರ ಮಟ್ಟಿಗೆ ನಾವು ಬೆಳಕಿನೊಂದಿಗೆ ಬೆರೆತು ಬಿಟ್ಟಿದ್ದೇವೆ, ಅದೇ ಪ್ರಕೃತಿಯ ನಿಯಮ ಕೂಡ. ಪ್ರಾಣಿಗಳ ಸಂತಾನೋತ್ಪತ್ತಿಯಿಂದ ಹಿಡಿದು ಅವುಗಳ ಆರೋಗ್ಯವಂತ ಬದುಕಿನವರೆಗೆ ಬೆಳಕಿನ ಪ್ರಭಾವ ಬಹುಮುಖ್ಯ ಪಾತ್ರವಹಿಸುತ್ತದೆ. ಇಂತಹ ಅತ್ಯಮೂಲ್ಯ  ಬೆಳಕಿನ ಬಗ್ಗೆ ತಿಳಿದುಕೊಳ್ಳುವುದು ಒಂದು ಕುತೂಹಲಕಾರಿ  ವಿಷಯ. ಇದೇ ಕುತೂಹಲದಲ್ಲಿ ಯೋಚಿಸುತ್ತಾ ಕುಳಿತಿರುವ ನಮ್ಮ ಮನಸ್ಸಿನಲ್ಲಿ ಏಳುವ ಪ್ರಶ್ನೆ ಬೆಳಕು ಎಂದರೇನು?, ಈ ಪ್ರಶ್ನೆಯನ್ನು  ಕೇಳಿದಷ್ಟೇ ವೇಗವಾಗಿ ಹಲವು ಉತ್ತರಗಳು ಬಂದು ಬಿಡುತ್ತವೆ. ಅದರಲ್ಲಿ ಹೆಚ್ಚಿನವರು ತುಂಬಾ ಸಲೀಸಾಗಿ ಹೇಳುವ ಉತ್ತರವೆಂದರೆ ನಮ್ಮ ಸುತ್ತಲೂ ಕಾಣುತ್ತಿರುವುದೆಲ್ಲವೂ ಬೆಳಕೇ ….. ಎಂದು. ಆದರೆ ಗಮನಿಸಿ ನಿಜವಾಗಿಯೂ ನಾವು ನಮ್ಮ ಸುತ್ತಲೂ ಕಾಣುತ್ತಿರುವುದು ಬೆಳಕನ್ನಲ್ಲ, ಭುವಿಯ ವಾತಾವರಣವನ್ನು; ಅದು ನಮಗೆ ಕಾಣಿಸುವಂತೆ ಮಾಡುತ್ತಿರುವ ಅಗೋಚರ ಶಕ್ತಿಯನ್ನೇ ಬೆಳಕು ಎಂದು ಕರೆಯುವುದು. 
ನಾವು ಏನನ್ನಾದರೂ ಓದುತ್ತಿದ್ದೇವೆ ಅಥವಾ ಯಾರನ್ನಾದರೂ ನೋಡುತ್ತಿದ್ದೇವೆ ಎಂದರೆ ಅದು ಬೆಳಕಿನ ಸಹಾಯವಿಲ್ಲದೆ ಸಾಧ್ಯವಾಗಲಾರದು. ಇನ್ನೂ ಹೇಳಬೇಕೆಂದರೆ, ನಮ್ಮ ಕವಿಗಳು ನಿಸರ್ಗದ ಕುರಿತು ಪೇಜುಗಟ್ಟಲೆ ಕವನಗಳನ್ನು ಗೀಚುತ್ತಾರಲ್ಲಾ ಅದಕ್ಕೂ ಈ ಬೆಳಕೇ ಕಾರಣ. ಬೆಳಕಿಲ್ಲದಿದ್ದರೆ ಗುಲಾಬಿಯ ಕೆಂಪು ನಿತ್ಯ ಹರಿದ್ವರ್ಣದ ಕಂಪು, ಭತ್ತದೆಲೆಯ ಹಸಿರು, ಅದರ ಬುಡದ ಕೆಸರು ಇದೆಲ್ಲವನ್ನೂ ಕತ್ತಲೆಯ ಕರಿಛಾಯೆಯೇ ನುಂಗಿಬಿಡುತ್ತಿತ್ತು, ಬಣ್ಣ ಬಣ್ಣದ ಲೋಕವೆಂಬುದು ಒಂದು ಅರ್ಥವಿಲ್ಲದ ಪದವಾಗಿ ಬಿಡುತಿತ್ತು. ಆದ್ದರಿಂದಲೇ ಬೆಳಕಿಗೆ ಪುರಾತನ ಕಾಲದಿಂದಲೂ ಅಪಾರ ಮನ್ನಣೆ ದೊರಕುತ್ತಿರುವುದು. ಜಗತ್ತಿನ ಅಪೂರ್ವ ಸೌಂದರ್ಯವನ್ನು ಬಿಚ್ಚಿಡುವ ಮಾಧ್ಯಮವಾದ್ದರಿಂದಲೋ ಏನೋ, ಈ ಬೆಳಕಿನ ಬಗ್ಗೆ ಹಲವು ಚಿಂತನೆಗಳು ಬಹಳ ಹಿಂದಿನ ಕಾಲದಿಂದಲೇ ನಡೆಯ ತೊಡಗಿದ್ದವು. ಗ್ರೀಕ್ ಮುಂತಾದ ದೇಶಗಳಲ್ಲಿ ಕ್ರಿಸ್ತಪೂರ್ವದಲ್ಲಿಯೇ ಪ್ಲೇಟೋ ಮತ್ತು ಅರಿಸ್ಟಾಟಲ್ ತಮ್ಮ ಹಲವು ಸಿದ್ಧಾಂತಗಳಲ್ಲಿ ಬೆಳಕಿನ ಸ್ವರೂಪವನ್ನು ವಿವರಿಸಲು ಪ್ರಯತ್ನಿಸಿದ್ದರು. ಹೆಚ್ಚು ಕಡಿಮೆ ಅದೇ ಕಾಲದಲ್ಲಿ ಭಾರತದ ಆರ್‍ಯಭಟ, ವರಾಹಿಮಿಹಿರಾ ಮುಂತಾದ ಜ್ಯೋತಿರ್ವಿಜ್ಞಾನಿಗಳು ಸಹ ಈ ಬೆಳಕಿನ ಹಿಂದೆ ಬಿದ್ದಿದ್ದರು ಎನ್ನುತ್ತವೆ ಐತಿಹ್ಯಗಳು. ನಂತರದ ದಿನಗಳಲ್ಲಿ ಡಿಕಾರ್ಟೆ ಎಂಬ ಭೌತಶಾಸ್ತ್ರಜ್ಞ ಬೆಳಕಿನ ರಚನೆಯ ಬಗ್ಗೆ ಮೊದಲ ಬಾರಿ ಸಿದ್ಧಾಂತವೊಂದರಲ್ಲಿ ಬೆಳಕು ಎಂಬುದು ಸಣ್ಣ ಸಣ್ಣ ಕಣಗಳಿಂದ ಮಾಡಲ್ಪಟ್ಟ ಒಂದು ಪ್ರವಾಹ ಎಂದು ಪ್ರತಿಪಾದಿಸುತ್ತಾನೆ. ಅದೇ ಸಿದ್ಧಾಂತವನ್ನು ಇಂಗ್ಲೆಂಡಿನ ಸರ್ ಐಸಾಕ್ ನ್ಯೂಟನ್ ಸ್ವಲ್ಪ ಮಾರ್ಪಡಿಸಿ ನ್ಯೂಟನ್ನನ ಕಣ ಸಿದ್ಧಾಂತ (ಕಾರ್ಪಸ್ಕುಲರ್ ಥಿಯರಿ)ದ ಮೂಲಕ ಬೆಳಕು ’ಕಾರ್ಪುಸ್ಕಲ್’ಗಳೆಂಬ ಕಣಗಳಿಂದ ಮಾಡಲ್ಪಟ್ಟಿದೆ ಎಂದೂ, ಅವುಗಳು ಮತ್ತು ಗಾಜಿನಂತ ವಸ್ತುಗಳ ಮಧ್ಯೆ ಇರುವ ಆಕರ್ಷಣೆ ಶಕ್ತಿಯಿಂದ ಬೆಳಕು ಅಂತಹ ವಸ್ತುಗಳ ಮೂಲಕ ಹಾದು ಹೋಗುತ್ತದೆಂದೂ, ಕನ್ನಡಿಯಂತಹ ವಸ್ತುವಿನ  ಜೊತೆ ಇರುವ ವಿಕರ್ಷಣೆಯಿಂದ ಅದು ಪ್ರತಿಫಲನ ಹೊಂದುತ್ತದೆ ಎಂದೂ ಪ್ರತಿಪಾದಿಸುತ್ತಾನೆ. ಆದರೆ ಮುಂದೆ ಅವನೇ ಮಾಡಿದ ’ನ್ಯೂಟನ್‌ನ ಉಂಗುರ’ಗಳಂತಹ ಕೆಲ ಬೆಳಕಿನ ಪ್ರಯೋಗಗಳಿಂದ ಈ ಸಿದ್ಧಾಂತದಲ್ಲಿ ದೋಷಗಳಿರುವುದು ಗೊತ್ತಾಗುತ್ತದೆ. ನಂತರ ಬಂದ ಹೈಗೆನ್ಸ್ ಎಂಬಾತ ಬೆಳಕು ತರಂಗಗಳ ರೂಪದಲ್ಲಿರುತ್ತದೆ ಮತ್ತು ತನ್ನ ಚಲನೆಗೆ ವಿಶ್ವದೆಲ್ಲೆಡೆ ಪಸರಿಸಿರುವ ಅಗೋಚರ  ’ಈಥರ್’ ಎಂಬ ಮಾಧ್ಯಮವನ್ನು ಬಳಸಿಕೊಳ್ಳುತ್ತದೆ ಎಂದು ಪ್ರತಿಪಾದಿಸುತ್ತಾನೆ. ಆದರೆ ಈ ಸಿದ್ಧಾಂತವೂ ಪ್ರಾಯೋಗಿಕವಾಗಿ ಈಥರ್ ಮಾಧ್ಯಮದ ಇರುವಿಕೆಯನ್ನು ತೋರಿಸಿಕೊಡುವಲ್ಲಿ ಸೋಲೊಪ್ಪಿಕೊಳ್ಳುತ್ತದೆ. ಜೊತೆಗ ಬೆಳಕು ನಿರ್ವಾತದಲ್ಲಿ ಅಂದರೆ ಯಾವುದೇ ಮಾಧ್ಯಮವಿಲ್ಲದಿದ್ದಲ್ಲಿಯೂ ಹೇಗೆ ಚಲಿಸುತ್ತದೆ ಎಂಬುದಕ್ಕೆ ಆ ಸಿದ್ಧಾಂತ ವಿವರಣೆ ನೀಡುವುದಿಲ್ಲ.  ಕಡೆಗೆ ಮ್ಯಾಕ್ಸವೆಲ್ ಎಂಬಾತ ಬೆಳಕು ಒಂದು ವಿದ್ಯುದ್ಕಾಂತೀಯ ತರಂಗವೆಂದೂ ಅದರಲ್ಲಿ ವಿದ್ಯುತ್ ಮತ್ತು ಕಾಂತಕ್ಷೇತ್ರಗಳ ಪ್ರಭಾವ ಇರತ್ತವೆಂದೂ ಅವು ಯಾವುದೇ ಮಾಧ್ಯಮದ ಅವಶ್ಯಕತೆ ಇಲ್ಲದೆ ಚಲಿಸಬಲ್ಲವೆಂದೂ ಪ್ರತಿಪಾದಿಸುತ್ತಾನೆ. ಅಲ್ಲದೆ ಹೆನ್ರಿ ಹರ್ಡ್ಸ್ ಎಂಬಾತ ಈ ಸಿದ್ಧಾಂತಕ್ಕೆ ಪ್ರಾಯೋಗಿಕ ನಿದರ್ಶನವನ್ನು ಮಾಡಿ ತೋರಿಸುವುದರ ಜೊತೆಗೇ ವಿದ್ಯುತ್ ಮತ್ತು ಕಾಂತಕ್ಷೇತ್ರಗಳನ್ನು ಬಳಸಿ ವಿದ್ಯುದ್ಕಾಂತೀಯ ತರಂಗಗಳನ್ನು ಉತ್ಪಾದಿಸಬಹುದು ಎಂದೂ ತೋರಿಸಿಕೊಟ್ಟನು. ಹಾಗಾಗಿ ಬೆಳಕನ್ನು ಒಂದು ವಿದ್ಯುದ್ಕಾಂತೀಯ ತರಂಗವಾಗಿ ಸಾರ್ವತ್ರಿಕವಾಗಿ ಒಪ್ಪಿಕೊಳ್ಳಲಾಯಿತು. ಆದರೆ ಕೆಲವೊಂದಿಷ್ಟು ಪ್ರಯೋಗಗಳಲ್ಲಿ ಬೆಳಕು ಕಣಗಳ ಪ್ರವಾಹದಂತೆ, ಇನ್ನೂ ಕೆಲವಷ್ಟರಲ್ಲಿ ವಿದ್ಯುದ್ಕಾಂತೀಯ ತರಂಗಗಳಂತೆ ವರ್ತಿಸುತ್ತಿರುವುದನ್ನು ಮ್ಯಾಕ್ಸ್ ಪ್ಲಾಂಕ್ ಎಂಬಾತ ಗಮನಿಸಿ, ಬೆಳಕಿಗೆ ಕೆಲವೊಮ್ಮೆ ತರಂಗಗಳಂತೆಯೂ ಮತ್ತೆ ಕೆಲವೊಮ್ಮೆ ಕಣಗಳಂತೆಯೂ ವರ್ತಿಸುವ ಇಬ್ಬಗೆಯ ಸ್ವಭಾವ ಅಥವಾ ದ್ವಂದ್ವ ಸ್ವಭಾವ ಇದೆಯೆಂದು ತೋರಿಸಿಕೊಟ್ಟನು. ಅಲ್ಲದೆ ಆ ಬೆಳಕಿನ ಕಣಗಳು ನಿರ್ದಿಷ್ಟ ಶಕ್ತಿಯ ಪ್ಯಾಕೆಟ್ಟುಗಳಾಗಿವೆ ಎಂದು ಪ್ರತಿಪಾದಿಸಿದನು. ಅವಕ್ಕೆ  ಶಕ್ತಿಯ ಪ್ಯಾಕೆಟ್ಟುಗಳೆಂಬ ಅರ್ಥ ಬರುವ ’ಫೋಟಾನ್ ಅಥವಾ ಕ್ವಾಂಟಮ್’ಗಳೆಂಬ ಹೆಸರನ್ನು ನೀಡಿದನು. ಈ ಫೋಟಾನ್ ಸಿದ್ಧಾಂತದಿಂದಲೇ ದ್ಯುತಿ ವಿದ್ಯುತ್ ಪರಿಣಾಮವನ್ನು ಐನ್‌ಸ್ಟೈನ್ ಯಶಸ್ವಿಯಾಗಿ ವಿವರಿಸಿ ನೋಬೆಲ್ ಪಡೆದದ್ದು. ಒಟ್ಟಾರೆಯಾಗಿ ಬೆಳಕಿನ ಈ ದ್ವಂದ್ವ ಸ್ವಭಾವದಿಂದ ಅದರ ನಡತೆಯನ್ನು ನಾವು ಕೆಲವೊಮ್ಮೆ ಸಂಧರ್ಭಕ್ಕನುಗುಣವಾಗಿ ಮ್ಯಾಕ್ಸ್‌ವೆಲ್ಲನ ವಿದ್ಯುದ್ಕಾಂತೀಯ ಸಿದ್ಧಾಂತದಿಂದಲೂ, ಇನ್ನೂ ಕೆಲವೊಮ್ಮೆ ಪ್ಲಾಂಕನ ಕ್ವಾಂಟಮ್ ಸಿದ್ಧಾಂತದಿಂದಲೂ ಅರ್ಥಮಾಡಿ ಕೊಳ್ಳಬೇಕಾಗುತ್ತದೆ.
ಈ ತೆರನಾದ ದ್ವಂದ್ವ ಸ್ವಭಾವದಿಂದಾದ ಬೆಳಕು ಅಪಾರ ವೇಗವಾಗಿ ಚಲಿಸುವ ಗುಣವನ್ನು ಹೊಂದಿದೆ. ವಿಶ್ವದಲ್ಲಿ ಅದಕ್ಕಿಂತ ವೇಗವಾಗಿ ಚಲಿಸುವ ಭೌತಿಕ ವಸ್ತು ಇನ್ನೊಂದಿಲ್ಲ ಎನ್ನಬಹುದು. ಆದ್ದರಿಂದ ಆ ವೇಗದ ಮೌಲ್ಯವನ್ನು ತಿಳಿಯಲು ಹಲವು ವಿಜ್ಞಾನಿಗಳು ತಮ್ಮ ಜೀವಮಾನವನ್ನೇ ಮುಡಿಪಿಟ್ಟಿದ್ದರಾದರೂ, ಅಮೇರಿಕಾದ ಮ್ಯೆಕೆಲ್‌ಸ್‌ನ್ ಎಂಬಾತ ಯಶಸ್ವಿಯಾಗಿ ಬೆಳಕು ನಿರ್ವಾತದಲ್ಲಿ ಸೆಕೆಂಡಿಗೆ ಹೆಚ್ಚು ಕಡಿಮೆ ಎರೆಡು ಲಕ್ಷದ ತೊಂಬತ್ತೊಂಬತ್ತು ಸಾವಿರ ಕಿಲೋಮೀಟರ್ ದೂರವನ್ನು ಕ್ರಮಿಸಬಲ್ಲದು ಎಂಬುದನ್ನ ಪ್ರಾಯೋಗಿಕವಾಗಿ ಕಂಡುಹಿಡಿಯುತ್ತಾನೆ. ಅದೇ ಮೌಲ್ಯವನ್ನೇ ನಾವು ಇಂದಿಗೂ ಯಶಸ್ವಿಯಾಗಿ ಉಪಯೋಗಿಸುತ್ತಿದ್ದೇವೆ. ಇಲ್ಲೊಂದು ಅಚ್ಚರಿಯ ವಿಷಯವೆಂದರೆ, ನಮ್ಮ ಕೆಲವು ಇತಿಹಾಸಕಾರರು ಹೇಳುವಂತೆ ಕ್ರಿ.ಪೂ.೧೫೦೦ರ ಸುಮಾರಿನಲ್ಲಿ ರಚಿತವಾದ ಋಗ್ವೇದದಲ್ಲಿರುವ, ಸೂರ್ಯನನ್ನು ಆರಾಧಿಸುವ ತಥಾಚ ಸ್ಮರ್ಯತೇ ಯೋಜನಾನಮ್ ಸಹಸ್ರಂ ದ್ವೇದ್ವೇ ಶತೇ, ದ್ವೇಚಯೋಜನೇ ಏಕೇನ ನಿಷಾರ್ಧೇನ ಕ್ರಮಮಾಣ ನಮೋಸ್ತುತೆ ಎಂಬ ಶ್ಲೋಕವನ್ನು ಸರಿಯಾಗಿ ವಿವರಿಸಿ, ಸಮೀಕರಿಸಿದಲ್ಲಿ ಬೆಳಕಿನ ವೇಗದ ಮೌಲ್ಯ ಸುಮಾರು ಮೂರು ಲಕ್ಷದ ಹತ್ತೊಂಬತ್ತು ಸಾವಿರ ಎಂದು ತಿಳಿಯುತ್ತದಂತೆ. ಇದು ಮ್ಯಾಕ್ಸ್‌ವೆಲ್ ನೀಡಿದ ಮೌಲ್ಯಕ್ಕೆ ಹೆಚ್ಚು ಕಡಿಮೆ ಹತ್ತಿರದಲ್ಲಿದೆ, ಇದು ವೈಜ್ಞಾನಿಕವಾಗಿ ವಿಶ್ವವೇ ಹಿಂದುಳಿದ ಕಾಲದಲ್ಲಿದ್ದ ಪುರಾತನ ಭಾರತೀಯರ ಅಪಾರ ಜ್ಞಾನ ಸಂಪತ್ತಿಗೆ ಹಿಡಿದ ಕನ್ನಡಿಯಾಗಿದೆ.
ಇದಿಷ್ಟೂ ಬೆಳಕಿನ ಸ್ವರೂಪದ ಬಗ್ಗೆಯಾದರೆ ಸುತ್ತಲಿನ ವಸ್ತುಗಳು ನಮಗೆ ಕಾಣುವ ಪರಿ ಮತ್ತೊಂದು ವೈಜ್ಞಾನಿಕ ಹಂದರ. ಒಂದು ಚಕ್ರವನ್ನು ತೆಗೆದುಕೊಳ್ಳೋಣ ಅದರ ಮೇಲ್ಮೈಯನ್ನ  ತ್ರಿಜ್ಯಗಳಿಂದ ಏಳು ಭಾಗಗಳನ್ನಾಗಿಸಿ ನೇರಳೆ, ದಟ್ಟ ನೀಲಿ, ನೀಲಿ, ಹಸಿರು, ಹಳದಿ, ಕೇಸರಿ ಮತ್ತು ಕೆಂಪು ಬಣ್ಣಗಳನ್ನು ತಲಾ ಒಂದೊಂದು ಭಾಗಗಳಿಗೆ ಹಚ್ಚಿ ಅದನ್ನು ಅದರ ಕೇಂದ್ರದಲ್ಲಿ ಹಿಡಿದು ವೇಗವಾಗಿ ತಿರುಗಿಸೋಣ. ಅಬ್ಬಾ ಏನಚ್ಚರಿ…! ಬಣ್ಣ ಬಣ್ಣವಾಗಿ ಕಾಣಬೇಕಿದ್ದ ಆ ಚಕ್ರ ಸಂಪೂರ್ಣ ಬಿಳಿ ಬಣ್ಣದ್ದಾಗಿ ಕಾಣುತ್ತಿದೆ. ಅಂದರೆ ಮೇಲೆ ಹೇಳಿದ ಬಣ್ಣಗಳು ವೇಗದಲ್ಲಿ ಸಮ್ಮಿಳಿತಗೊಂಡರೆ ಬಿಳಿ ಬಣ್ಣವಾಗಿ ಕಾಣಿಸಿಬಿಡುತ್ತವೆ ಎಂದಾಯಿತಲ್ಲವೆ. ಹೌದು ವಿಶ್ವದಲ್ಲಿರುವ ಎಲ್ಲಾ ಬಣ್ಣದ ಚಿತ್ತಾರಗಳೂ ನಮ್ಮ ಕಣ್ಮನ ಸೇರುವಂತೆ ಮಾಡುತ್ತಿರುವ ಬೆಳ್ಳಗೆ ಕಾಣುವ ಬೆಳಕೂ ಸಹ ಮೇಲೆ ಹೆಸರಿಸಿದ ಏಳು ಬಣ್ಣಗಳಿಂದ ಮಾಡಲ್ಪಟ್ಟಿದೆ. ಆದರೆ ಅವುಗಳ ಚಲನೆಯ ವೇಗ ಅತಿಯಾದ್ದರಿಂದ ಅವುಗಳ ಮಿಶ್ರಣ ಬಿಳಿ ಬಣ್ಣವಾಗಿ ನಮ್ಮ ಕಣ್ಣಿಗೆ ಕಾಣಿಸುತ್ತದೆ (ಇದನ್ನು ಮೊದಲು ಜಗತ್ತಿಗೆ ವಿವರಿಸಿದವನು ನ್ಯೂಟನ್). ಹಗಲಿನಲ್ಲಿ ಸೂರ್ಯನಿಂದ, ಉಳಿದ ಹೊತ್ತಿನಲ್ಲಿ ದೀಪಗಳಿಂದ ವಿದ್ಯುತ್ ದೀಪಗಳಿಂದ ಹೊರಡುವ ಬೆಳಕಿನ ಕಿರಣಗಳು ಯಾವುದೇ ವಸ್ತುವಿನ ಮೇಲೆ ಬಿದ್ದ ನಂತರ, ಅದರ ಬಣ್ಣಕ್ಕೆ ಸಮಾನ ತರಂಗ ದೂರ ಆಥವಾ ಬಣ್ಣ ಹೊಂದಿರುವ ಆ ಕಿರಣದ ಭಾಗಗಳು ಪ್ರತಿಫಲನ ಹೊಂದಿ ನಮ್ಮ ಕಣ್ಣನ್ನು ಸೇರುತ್ತವೆ. ಕಣ್ಣಿನೊಳಗಿರುವ ’ರೆಟಿನಾ’ ಎಂಬ ಪರದೆಯು ಹಲವಾರು ದ್ಯುತಿಸಂವೇದಕಗಳಿಂದ ಮಾಡಲ್ಪಟ್ಟಿದೆ. ಅವುಗಳ  ಮೇಲೆ ಬಿದ್ದ ಬೆಳಕಿನನ್ವಯ ಅವು ಮೆದುಳಿಗೆ ವಿದ್ಯುತ್ ಸಂಜ್ಞೆಗಳನ್ನು ಕಳಿಸುತ್ತವೆ ಹಾಗು ಅದನ್ನು ನಮ್ಮ ಮೆದುಳು ಅರ್ಥೈಸಿಕೊಳ್ಳುತ್ತದೆ. ಈ ರೀತಿಯಾಗಿ ಬೆಳಕು ನಮಗೆ ವಿಶ್ವದ ಸೌಂದರ್ಯವನ್ನು ಸವಿಯಲು ವೇದಿಕೆಯನ್ನೊದಗಿಸುತ್ತದೆ.
ನಿಜ ಜೀವನದಲ್ಲಿಯೇ ಇಷ್ಟೊಂದು ವಿಸ್ಮಯದ ಗೂಡಾಗಿರುವ ಬೆಳಕಿನ ರಹಸ್ಯ ಅಕ್ಷಯ ಪಾತ್ರೆಯಂತೆ ಹುಡುಕಿದಷ್ಟೂ ಮುಗಿಯುವುದೇ ಇಲ್ಲ. ಪಾಪ ಸೂರ್‍ಯ ಹಗಲು ಹೊತ್ತಿನಲ್ಲಿ ನಮಗೆ ಬೆಳಕನ್ನು ಧಾರಾಕಾರವಾಗಿ ನೀಡಿಬಿಡುತ್ತಾನಾದ್ದರಿಂದ ಅದರ ಬೆಲೆ ನಮಗೆ ಗೊತ್ತಾಗುವುದಿಲ್ಲ. ನಿಮಗೆ ನಿಜವಾಗಿಯೂ ಅದು ಗೊತ್ತಾಗುವುದು ನೀವು ಬೆಳಕಿಗಾಗಿ ಬಳಸಿದ ವಿದ್ಯುತ್ತಿನ ಬಿಲ್ಲು ನಿಮ್ಮ ಕೈ ಸೇರಿದಾಗ ಮಾತ್ರ.

ಸೂರ್ಯನ ಸುತ್ತುವ ಗ್ಲೋಬು ಮತ್ತು ನ್ಯೂಟನ್ನಿನ ಸೇಬು

ಮೊನ್ನೆ ಹತ್ತಿರದ ಪ್ರಾಥಮಿಕ ಶಾಲೆಯೊಂದರ ಬಳಿ ಹೋಗುತ್ತಿದ್ದೆ, ಮೈದಾನದಲ್ಲಿ ‘ಸೂರ್ಯ’ ಎಂಬ ಫಲಕ ಹಿಡಿದ ಒಬ್ಬ ಹುಡುಗ ನಿಂತಿದ್ದ, ಆ ಶಾಲೆಯ ಮೇಷ್ಟ್ರು ಕೈಯಲ್ಲಿ ಒಂದು ಗ್ಲೋಬು ಹಿಡಿದು ಆ ಹುಡುಗನ ಸುತ್ತಾ ಸುತ್ತುತ್ತಿದ್ದರು ಉಳಿದವರು ಅವರಿಬ್ಬರನ್ನೇ ಬಾಯಿ ಕಳೆದುಕೊಂಡು ನೋಡುತ್ತಾ ನಿಂತಿದ್ದರು ನಾನೂ ಅವರನ್ನು ಸೇರಿಕೊಂಡೆ. ಅವರೇಕೆ ಹಾಗೆ ಮಾಡುತ್ತಿದ್ದಾರೆ ಎಂದು ಆ ಕ್ಷಣ ಅರ್ಥವಾಗಲಿಲ್ಲ, ಆಮೇಲೆ ವಿಷಯ ಹೊಳೆಯಿತು, ಗ್ರಹಗಳ  ಚಲನೆಯ ಬಗ್ಗೆ ಪಾಠ ಮಾಡಲು ಆ ಶಿಕ್ಷಕ ಈ ಚಟುವಟಿಕೆಯನ್ನು ಮಾಡಿಸುತ್ತಿದ್ದರು. 
ಈಗ ನಿಮ್ಮ ಮನಸ್ಸಿನಲ್ಲಿ ಒಂದು ಪ್ರಶ್ನೆ ಹುಟ್ಟುತ್ತಿರಬಹುದು ? ಈ ಸೂರ್ಯನನ್ನು ಸುತ್ತುವ ಗ್ಲೋಬಿಗೂ ಶೀರ್ಷಿಕೆಯಲ್ಲಿ ಹೇಳಿರುವ ನ್ಯೂಟನ್ನಿನ  ಸೇಬಿಗೂ ‘ಎತ್ತಣದೆತ್ತಣ ಸಂಬಂಧವಯ್ಯಾ…?' ಎಂದು. ನಮ್ಮ ದೊಡ್ಡವರು ಹೆಳಿದ್ದಾರಲ್ಲ ಬೆಟ್ಟದ ನೆಲ್ಲಿಕಾಯಿ ಮತ್ತು ಸಮುದ್ರದ ಉಪ್ಪು ಎರೆಡೂ ಬೇರೆ ಬೇರೆ ಎನಿಸಿದರೂ ಅವುಗಳ ನಡುವೆ ಒಂದು ಅವಿನಾಭಾವ ಸಂಬಂಧವಿದೆ ಎಂದು, ನಿಮ್ಮ ನಾಲಿಗೆಯನ್ನೇ ಕೇಳಿ ನೋಡಿ ಅದೊಂದು ಬಿಚ್ಚಿಟ್ಟ ಸತ್ಯ, ಹಾಗೆಯೇ ಈ ಗ್ಲೋಬು ಮತ್ತು ಸೇಬುಗಳ ಸಂಬಂಧ.
ಇತಿಹಾಸಕಾರರು ಹೇಳುವಂತೆ ಕ್ರಿ.ಪೂ ಆರನೇ ಶತಮಾನದಲ್ಲಿ ಅದರಲ್ಲೂ ಗ್ರೀಸ್ ಮುಂತಾದ ಭಾಗಗಳಲ್ಲಿ ಜನರು ಅತೀ ಕ್ರಿಯಾಶೀಲರೂ, ಚಿಂತನಾಶೀಲರೂ ಆಗಿದ್ದರು. ಅರಿಸ್ಟಾಟಲ್‍ರಂತಹ ಹಲವು ಗ್ರೀಕ್ ತತ್ವಜ್ಞಾನಿಗಳು ಪುರುಸೊತ್ತಿನ ಸಮಯದಲ್ಲಿ ಆಕಾಶವೀಕ್ಷಣೆ ಮಾಡಿ ಸೂರ್ಯ, ನಕ್ಷತ್ರ, ಚಂದ್ರ ಮುಂತಾದ ಕಣ್ಣಿಗೆ ಕಾಣುವ ಆಕಾಶ ಕಾಯಗಳ ಬಗ್ಗೆ ಮಾಹಿತಿ ಕಲೆಹಾಕುತ್ತಾ, ಚರ್ಚೆಗಳನ್ನು ನಡೆಸುತ್ತಿದ್ದರು. ಅವುಗಳ ಸಹಾಯದಿಂದ ‘ ಭೂಮಿಯೇ ಇಡೀ ವಿಶ್ವದ ಕೇಂದ್ರವಾಗಿದ್ದು, ವಿಶ್ವದ ಎಲ್ಲಾ ಕಾಯಗಳು ಭೂಮಿಯ ಸುತ್ತಾ ವೃತ್ತಾಕಾರದಲ್ಲಿ ಸುತ್ತುತ್ತಿರುತ್ತವೆ’ ಎಂದು ತಿರ್ಮಾನಿಸಿದ್ದರು. ಜೊತೆಗೆ ಟಾಲೆಮಿ ಎಂಬ ತತ್ವಜ್ಞಾನಿಯೊಬ್ಬ ಇದಕ್ಕೆ ವೈಜ್ಞಾನಿಕ ಪುಷ್ಠಿಗಳನ್ನೂ ನೀಡತೊಡಗಿದ್ದ, ಆದ್ದರಿಂದ ಅದನ್ನು ಟಾಲೆಮಿಯ ಭೂಕೇಂದ್ರ ಸಿದ್ಧಾಂತ ಎಂದು ಕರೆಯಲಾಗುತ್ತಿತ್ತು. ಈ ಸಿದ್ಧಾಂತಕ್ಕೆ ಅನಂತರ ಶುರುವಾದ ಕ್ರಿಶ್ಚಿಯನ್ ವಿಚಾರಧಾರೆಗಳು ಸಹ ಸ್ವರ್ಗ, ನರಕಗಳೆಂಬ ಊಹಾ ಲೋಕಗಳ ಸಿದ್ಧಾಂತಗಳನ್ನು ತಳುಕು ಹಾಕಿಬಿಟ್ಟವು. ಆಗ ಧಾರ್ಮಿಕ ವಿಚಾರಧಾರೆಗಳ ವ್ಯಾಪ್ತಿ ವಿಶಾಲವಾಗಿತ್ತು ಮತ್ತು ಅದೇ ಸಮಯದಲ್ಲಿ ಭಾರತದಲ್ಲಿ ಚಾಲ್ತಿಯಲ್ಲಿದ್ದ ಜ್ಯೋತಿಷ್ಯಾಸ್ತ್ರಗಳೂ ಇದನ್ನೇ ಹೇಳುತ್ತಿದ್ದವು. ಆದ್ದರಿಂದ ಸಹಜವಾಗಿಯೇ ಈ ಭೂಕೇಂದ್ರ ಸಿದ್ಧಾಂತವನ್ನೇ ಜಗತ್ತಿನಾದ್ಯಂತ ಒಪ್ಪಿಕೊಳ್ಳಲಾಯಿತು. ಆದರೆ ಆ ಸಿದ್ಧಾಂತವನ್ನಿಟ್ಟುಕೊಂಡು ಗ್ರಹಗಳ ಚಲನೆಯ ಎಲ್ಲಾ ಮಜಲುಗಳನ್ನು ವಿವರಿಸುವುದು ತೀರಾ ಕಷ್ಟಸಾಧ್ಯವಾಗಿತ್ತು. ಕ್ರಿ.ಪೂ 15ನೇ ಶತಮಾನದ ಸುಮಾರಿನಲ್ಲಿ ಪ್ರಾಯಶಃ ಪೋಲೆಂಡಿನವನಾದ ನಿಕೋಲಸ್ ಕೋಪರ್ನಿಕಸ್ ಎಂಬ ಸಾಧು, ಟಾಲೆಮಿಯ ಸಿದ್ಧಾಂತವನ್ನು ತಪ್ಪು ಎಂದು ಸಾಧಿಸುತ್ತಾನೆ. ಅವನು ‘ಭೂಮಿ ಮತ್ತು ಇನ್ನುಳಿದ ಎಲ್ಲಾ ಆಕಾಶಕಾಯಗಳೂ ಸೂರ್ಯನನ್ನು ವರ್ತುಲಾಕಾರದಲ್ಲಿ ಸುತ್ತುತ್ತವೆ’ ಎಂದು ವಾದಿಸಿದ್ದನಾದರೂ ಸಮಕಾಲಿನ ಜನರಿಂದ ಮತ್ತು ಆಗಿನ ನ್ಯಾಯಸ್ಥಾನಗಳಾಗಿದ್ದ ಚರ್ಚ್‍ಗಳಿಂದ ಈತ ವಾಗ್ದಂಡನೆಗೊಳಗಾಗಿ ಎಲ್ಲರ ಕ್ಷಮೆಯನ್ನೂ ಕೋರಿದ್ದ ಎಂದು ಹೇಳಲಾಗುತ್ತದೆ. ಅದೇನೋ ಹೇಳುತ್ತಾರಲ್ಲ ‘ಹುಲುಕಡ್ಡಿಯ ಆಸರೆ ಹಿಡಿದು ಪ್ರವಾಹಕ್ಕೆ ವಿರುದ್ದ ಈಜಿದಂತೆ’ ಎಂದು, ಹಾಗಾಗಿತ್ತು ಹೆಚ್ಚಿನ ಪುರಾವೆಗಳಿಲ್ಲದ ಕೋಪರ್ನಿಕಸ್‍ನ ವಾದ, ಅದೇ ಸಮಯದಲ್ಲಿ ಇಟಲಿಯಲ್ಲಿ ಗೆಲಿಲಿಯೋ ಗೆಲಿಲಿ ಎಂಬ ಖಗೋಳಶಾಸ್ತ್ರಜ್ಞ ತಾನೇ ಕಂಡುಹಿಡಿದ ದೂರದರ್ಶಕವನ್ನು ಬಳಸಿ ಕ್ರೋಢೀಕರಿಸಿದ ಮಾಹಿತಿಗಳಿಂದ ಕೋಪರ್ನಿಕಸ್‍ನ ಸಿದ್ಧಾಂತವನ್ನು ಎತ್ತಿ ಹಿಡಿದ, ಆದರೆ ಇವನ ಅದೃಷ್ಟ ನೆಟ್ಟಗಿರಲಿಲ್ಲ ; ಮೂಲತಃ ಹಠಮಾರಿಯಾಗಿದ್ದ ಈತ ದೂರದರ್ಶಕದಿಂದ ಸೂರ್ಯನನ್ನು ನೋಡಿ ನೋಡಿ ಕಣ್ಣು ಕಳೆದುಕೊಂಡ, ಅನಂತರ ಯಾರಿಗೂ ಜಗ್ಗದೆ ಈ ಸೂರ್ಯಕೇಂದ್ರ ಸಿದ್ಧಾಂತದ ವಾದ ಮಾಡಿ ‘ರಾಜದ್ರೋಹ’ ದ ಆರೋಪದ ಮೇಲೆ ಪ್ರಾಣವನ್ನೂ ಕಳೆದುಕೊಂಡ.
ಆದರೆ ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಗೆಲಿಲಿಯೋ, ಕೋಪರ್ನಿಕಸ್‍ಗಿಂತ ಮುಂಚೆಯೇ ಸುಮಾರು 1000 ವರ್ಷಗಳ ಹಿಂದೆ ಭಾರತದ ಆರ್ಯಭಟ(ಕ್ರಿ.ಪೂ 5ನೇ ಶತಮಾನ) ಎಂಬುವವನು ತನ್ನ ಕೆಲವು ಗ್ರಂಥಗಳಲ್ಲಿ ಸೂರ್ಯಕೇಂದ್ರ ಸಿದ್ಧಾಂತದ ಬಗ್ಗೆ ವಿವರಿಸಿದ್ದಾನೆ. ಆದರೆ ಇದು ಬೆಳಕಿಗೆ ಬಂದದ್ದು ಮಾತ್ರ ತೀರಾ ಇತ್ತೀಚೆಗೆ. ಗೆಲಿಲಿಯೋನ ನಂತರದ ಕಾಲದಲ್ಲಿ ಟೈಕೊ ಬ್ರಾಹೆ ಎಂಬಾತ ಇದೇ ರೀತಿ ಅತೀ ನಿಖರವಾದ ಮಾಹಿತಿಗಳನ್ನು ಕಲೆಹಾಕಿದ, ಆ ಮಾಹಿತಿಗಳು ಕೋಪರ್ನಿಕಸ್‍ನ ಸಿದ್ಧಾಂತಗಳಿಗೆ ಪೂರಕವಾಗಿದ್ದವಾದರೂ ಆತ ಇವುಗಳನ್ನು ಯಾರೊಂದಿಗೂ ಹಂಚಿಕೊಳ್ಳಲಿಲ್ಲ. ಕೇವಲ ಮಾಹಿತಿ, ದಾಖಲೆಗಳ ಸಂಗ್ರಹ ಮಾಡುತ್ತ ತನ್ನ ಜೀವಮಾನವನ್ನೇ ಕಳೆದುಬಿಟ್ಟ. ಆದರೆ ಆತನ ಅತ್ಯಮೂಲ್ಯ ದಾಖಲೆಗಳು ಮತ್ತು ಮಾಹಿತಿಗಳನ್ನು ಉಪಯೋಗಿಸಿಕೊಂಡು ವಿವರವಾದ ಅಧ್ಯಯನದ ಮೂಲಕ ಅವನ ಶಿಷ್ಯ ಜೊಹಾನಸ್ ಕೆಪ್ಲರ್ ಎಂಬಾತ ಗ್ರಹೀಯ ಚಲನೆಯ ಬಗ್ಗೆ ಮೂರು ಮಹತ್ವದ ನಿಯಮಗಳನ್ನು ಜಗತ್ತಿನ ಮುಂದಿಡುತ್ತಾನೆ.
ಮೊದಲನೆಯದು, ಎಲ್ಲಾ ಗ್ರಹಗಳು ಸೂರ್ಯನ ಸುತ್ತಾ ಧೀರ್ಘವೃತ್ತಾಕಾರದಲ್ಲಿ ಸುತ್ತುತ್ತವೆ, ಹಾಗೂ ಆ ಧೀರ್ಘ ವೃತ್ತದ ಎರೆಡು ನಾಭಿ (ಫೋಕಸ್)ಗಳಲ್ಲಿ ಒಂದರಲ್ಲಿ ಸೂರ್ಯನಿರುತ್ತಾನೆ.
ಎರಡನೆಯದು, ಸೂರ್ಯನಿಂದ ಗ್ರಹವೊಂದಕ್ಕೆ ಎಳೆದ ಒಂದು ಊಹಾ ರೇಖೆಯು ಸಮಾನ ಸಮಯಾಂತರಗಳಲ್ಲಿ ಸಮಾನ ಪ್ರದೇಶ ವಿಸ್ತಾರಗಳನ್ನು ಕ್ರಮಿಸುತ್ತದೆ.
ಮೂರನೆಯದು, ಗ್ರಹವೊಂದು ಸೂರ್ಯನ ಸುತ್ತ ಒಂದು ಬಾರಿ ಸುತ್ತಲು ತೆಗೆದುಕೊಳ್ಳುವ ಸಮಯದ ವರ್ಗವು ಆ ಗ್ರಹದಿಂದ ಸೂರ್ಯನಿಗಿರುವ ಸರಾಸರಿ ದೂರದ ಘನ ಮೌಲ್ಯಕ್ಕೆ ನೇರ ಅನುಫಾತದಲ್ಲಿರುತ್ತದೆ.
ಇವನ್ನೆ ಇಂದಿಗೂ ನಾವು ಪ್ರಾಥಮಿಕ ಹಂತದಲ್ಲಿ ಓದುತ್ತಿರುವುದು, ಬಳಸುತ್ತಿರುವುದು. ಇಲ್ಲಿ ಕುತೂಹಲದ ವಿಷಯವೇನೆಂದರೆ ಕೆಪ್ಲರ್‍ಗೆ ಈ ಮೂರೂ ವಿಷಯಗಳು ಗೊತ್ತಾಯಿತಾದರೂ ಅವು ಏಕೆ ಹೀಗೆ ? ಎಂಬುದು ಮಾತ್ರ ತಿಳಿದಿರಲಿಲ್ಲ. ಅದಕ್ಕೆ ಉತ್ತರ ಹುಡುಕಿಕೊಟ್ಟವನೇ ನಮ್ಮ ಸೇಬು ಹಣ್ಣಿನ ನ್ಯೂಟನ್.
ಅಸಾಮಾನ್ಯ, ಅಪ್ರತಿಮ ಭೌತಶಾಸ್ತ್ರಜ್ಞರುಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಅದ್ಭುತ ಪ್ರತಿಭಾವಂತ ಸರ್ ಐಸಾಕ್ ನ್ಯೂಟನ್. ಈ ನ್ಯೂಟನ್ ಜನಮಾನಸಕ್ಕೆ ಬಹಳ ಹತ್ತಿರದವನಾಗಿಬಿಟ್ಟಿದ್ದಾನೆ, ನಿಸರ್ಗ ರಹಸ್ಯಗಳನ್ನು ಬೇಧಿಸಿದ್ದವನಾದ್ದರಿಂದಲೋ ಅಥವಾ ಪಕ್ಕದಲ್ಲೇ ಬಿದ್ದ ಸೇಬುಹಣ್ಣನ್ನು ತಿನ್ನುವುದನ್ನು ಬಿಟ್ಟು ಅದು ಏಕೆ ಬಿತ್ತು ಎಂದು ತಲೆಕೆಡಿಸಿಕೊಂಡದ್ದಕ್ಕಾಗಿಯೋ ಗೊತಿಲ್ಲ…!
ಈ ನಮ್ಮ ನ್ಯೂಟನ್ ಮಹಾಶಯ ಒಮ್ಮೆ ಅಜ್ಜಿ ಮನೆಯ ಬಳಿಯಿದ್ದ ಸೇಬಿನ ತೋಟದಲ್ಲಿ ಕೂತಿದ್ದಾಗ ಮರದಿಂದ ಸೇಬು ಹಣ್ಣೊಂದು ಕೆಳಕ್ಕೆ ಬೀಳುತ್ತದೆ. ಯೋಚಿಸಿ ನಿಮ್ಮ ಹತ್ತಿರದಲ್ಲಿ ಒಂದು ಸೇಬು ಹಣ್ಣು ಬಿದ್ದರೆ ಏನು ಮಾಡುತ್ತೀರಿ ? ಹಸಿದಿದ್ದರೆ ಕ್ಷಣಾರ್ಧದಲ್ಲಿ ಅದು ನಿಮ್ಮ ಹೊಟ್ಟೆ ಸೇರುತ್ತದೆ, ಹಸಿವಿಲ್ಲದಿದ್ದರೆ ನಿಮ್ಮ ಜೇಬು ಸೇರಿರುತ್ತದೆ; ಹಸಿವಾದಾಗ ತಿನ್ನಲಿಕ್ಕೆಂದು. ಆದರೆ ಈತ ಏನು ಮಾಡಿದ ಗೊತ್ತೇ? ಅಜ್ಜಿ ಮನೆಯಾದ್ದರಿಂದ ಹೊಟ್ಟೆಯಲ್ಲಿ ಮತ್ತೆ ಜಾಗವಿಲ್ಲದಷ್ಟು ತಿಂದಿದ್ದ ಎನಿಸುತ್ತದೆ ಅದಕ್ಕೆ ಪುರುಸೊತ್ತಿನಲ್ಲಿ ‘ಅದು ಕೆಳಕ್ಕೇ ಏಕೆ ಬಿತ್ತು ? ಮೇಲಕ್ಕೆ ಏಕೆ ಹೋಗಲಿಲ್ಲ..?’ ಎಂದು ಯೋಚಿಸತೊಡಗುತ್ತಾನೆ.. ಹೀಗೆ ಬಂದ ವಿಚಾರಗಳನ್ನೆಲ್ಲ ಬಗೆದು ಅಗೆದು ಆ ಹಣ್ಣನ್ನು ಭೂಮಿಯೆಡೆಗೆ ಸೆಳೆದ ಒಂದು ಶಕ್ತಿಯನ್ನು ಪತ್ತೆಹಚ್ಚಿ ಬಿಡುತ್ತಾನೆ, ಆ ಶಕ್ತಿಯೇ ‘ಗುರುತ್ವಾಕರ್ಷಣ ಶಕ್ತಿ’. ಈ ಆವಿಷ್ಕಾರ ವೈಜ್ಞಾನಿಕ ಕ್ರಾಂತಿಯೊಂದಕ್ಕೆ ಮುನ್ನುಡಿಯಾಗಿಬಿಡುತ್ತದೆ. ಆ ಮೂಲಕ ಮನುಕುಲವನ್ನು ಆ ಸಮಯದಲ್ಲಿ ಕಾಡುತ್ತಿದ್ದ ಹಲವಾರು ಪ್ರಶ್ನೆಗಳಿಗೆ, ನಿಗೂಢತೆಗೆಳಿಗೆ ಉತ್ತರ ಸಿಗತೊಡಗುತ್ತವೆ. ನಾವು ಈಗ ಕಾಲೇಜಿನವರೆಗೆ ಓದುವ ಭೌತಶಾಸ್ತ್ರದಲ್ಲಿ ಮುಕ್ಕಾಲು ಭಾಗ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಆ ಆವಿಷ್ಕಾರದ ಭಾಗಗಳೇ ಆಗಿವೆ. ಹೀಗೆ ಮಾತನಾಡುವಾಗ ನನ್ನ ಗೆಳೆಯರೊಬ್ಬರು ಹೇಳಿದ್ದರು ‘ಛೇ ಆ ನ್ಯೂಟನ್ ತೆಂಗಿನ ತೋಟದಲ್ಲಾದರೂ ಕೂರಬಾರದಿತ್ತೇ ಮಹರಾಯ, ಸೇಬಿನ ಬದಲು ತೆಂಗಿನಕಾಯಿ ತಲೆ ಮೇಲೆ ಬಿದ್ದಿದ್ದರೆ ಭೌತಶಾಸ್ತ್ರ ಓದುವುದೇ ತಪ್ಪುತ್ತಿತ್ತಲ್ಲಾ’ ಎಂದು. ಈ ಕಥೆಗಳು ಎಷ್ಟರಮಟ್ಟಿಗೆ ನಿಜವೆಂದು ಹೇಳುವುದು ತೀರಾ ಕಷ್ಟಕರ, ಬಾಯಿಂದ ಬಾಯಿಗೆ ಹರಿದು ಬಂದಿರಬಹುದು ಎಂದಿಟ್ಟುಕೊಳ್ಳೋಣ. ಆದರೆ ಪುರಾವೆಗಳ ಪ್ರಕಾರ ಹೇಳುವುದಾದರೆ ಭೂಮಿಯ ಸುತ್ತ ಚಂದ್ರನ ಚಲನೆಯನ್ನು ಗಮನಿಸಿದ ನ್ಯೂಟನ್, ಆ ಚಲನವಲನಗಳನ್ನು ಗಂಭೀರ ತಾರ್ಕಿಕ ಮತ್ತು ಗಣಿತೀಯ ಲೆಕ್ಕಾಚಾರಗಳ ಮುಖಾಂತರ ‘ಭೂಮಿ ಯಾವುದೋ ಒಂದು ಅಗೋಚರ ಬಲದಿಂದ ಚಂದ್ರನು ತನ್ನನ್ನು ಸುತ್ತುವಂತೆ ಮಾಡಿಕೊಂಡಿದೆ.’ ಎಂಬ ತಿರ್ಮಾನಕ್ಕೆ ಬರುತ್ತಾನೆ. ನಂತರ ಇದೇ ವಿಚಾರವನ್ನು ಸೂರ್ಯನನ್ನು ಸುತ್ತುವ ಕಾಯಗಳಿಗೂ ಅನ್ವಯಿಸಿ  ನೋಡುತ್ತಾನೆ. ಅವನ ಈ ಲೆಕ್ಕಾಚಾರಗಳು ಸರಿ ಎಂದು ಪರೀಕ್ಷಿಸಿಕೊಂಡ ನಂತರ ಅವನ ಈ ಫಲಿತಾಂಶಗಳನ್ನು ಸೇರಿಸಿ ತನ್ನ ‘ಸಾರ್ವತ್ರಿಕ  ಗುರುತ್ವಾಕರ್ಷಣಾ ನಿಯಮ’ವನ್ನು ಮಂಡಿಸುತ್ತಾನೆ. ಅದರ ಪ್ರಕಾರ ವಿಶ್ವದಲ್ಲಿ ದ್ರವ್ಯರಾಶಿ(ತೂಕವೆಂದು ಅಂದಾಜಿಸಿಕೊಳ್ಳಬಹುದಾದರೂ ತೂಕವಲ್ಲ) ಯನ್ನು ಹೊಂದಿರುವ ಪ್ರತಿಯೊಂದು ಕಾಯವು/ ವಸ್ತುವು, ದ್ರವ್ಯರಾಶಿಯನ್ನು ಹೊಂದಿರುವ ಪ್ರತೀ ಮತ್ತೊಂದು ಕಾಯ/ ವಸ್ತುವನ್ನು ‘ ಗುರುತ್ವಾಕರ್ಷಣ ಬಲ’ ದಿಂದ ಆಕರ್ಷಿಸುತ್ತದೆ ಹಾಗು ಆ ಬಲವು ಎರೆಡೂ ದ್ರವ್ಯರಾಶಿಗಳ ಗುಣಲಬ್ಧಕ್ಕೆ ನೇರ ಅನುಪಾತದಲ್ಲಿಯೂ ಹಾಗೂ ಅವುಗಳ ನಡುವಿನ ಅಂತರದ ವರ್ಗಕ್ಕೆ ವಿಲೋಮ ಅನುಪಾತದಲ್ಲಿಯೂ ಇರುತ್ತದೆ’. ಸರಳವಾಗಿ ‘ಅಂತರವನ್ನು ಬದಲಾಯಿಸದೆ, ವಸ್ತುಗಳ ದ್ರವ್ಯರಾಶಿ ಹೆಚ್ಚಾದರೆ ಗುರುತ್ವಬಲ ಹೆಚ್ಚಾಗುತ್ತದೆ ; ದ್ರವ್ಯರಾಶಿಗಳು ಬದಲಾಗದೆ ಅಂತರ ಹೆಚ್ಚಾದರೆ ಗುರುತ್ವಬಲ ಕಡಿಮೆಯಾಗುತ್ತದೆ’ ಎಂದು ಹೇಳಬಹುದು.
ಒಟ್ಟಾರೆ ವಿಶ್ವದಲ್ಲಿ ದ್ರವ್ಯರಾಶಿ ಇರುವ ವಸ್ತುಗಳು ಪರಸ್ಪರ ಒಂದನ್ನೊಂದು ಆಕರ್ಷಿಸುತ್ತವೆಯೆಂದರೆ ಇದಕ್ಕೆ ಕಾರಣ ಗುರುತ್ವಾಕರ್ಷಣ ಶಕ್ತಿ. ಮಹಿಳಾ ಕಾಲೇಜುಗಳ ಮುಂದೆ ಹುಡುಗರು ನಿಲ್ಲುತ್ತಾರಲ್ಲಾ…! ಖಂಡಿತವಾಗಿಯೂ ಆ ಆಕರ್ಷಣೆ ಗುರುತ್ವಾಕರ್ಷಣೆಯಲ್ಲ. ಆದರೂ ಆ ಗಂಡು ಮತ್ತು ಹೆಣ್ಣು ಶರೀರಗಳಿಗೂ ದ್ರವ್ಯರಾಶಿ ಇರುವುದರಿಂದ ಗುರುತ್ವಾಕರ್ಷಣೆ ಇರಬೇಕಲ್ಲವೇ ? ಹೌದಲ್ಲಾ… ನ್ಯೂಟನ್ ಇದರ ಬಗ್ಗೆ ಹೇಳಲಿಲ್ಲವೇ.. ಎಂದು ಯೋಚಿಸುತ್ತಿದ್ದೀರಾ, ಖಂಡಿತಾ ಹೇಳಿದ್ದಾನೆ ಅವರುಗಳ ಮಧ್ಯೆ, ನಮ್ಮ ನಿಮ್ಮೆಲ್ಲರ ಮಧ್ಯೆಯೂ ಗುರುತ್ವ ಬಲವಿದೆ ಆದರೆ ಅದರ ಪರಿಮಾಣ ತುಂಬಾ ಕಮ್ಮಿಯಾಗಿರುತ್ತದೆ. (ನಮ್ಮ ಕೈ ಮೇಲೆ ಸೊಳ್ಳೆ ಕೂತಾಗ ಭಾರವಾಗುತ್ತದಲ್ಲಾ ಅಷ್ಟು) ಆದ್ದರಿಂದ ಅದು ನಮ್ಮ ಅನುಭವಕ್ಕೆ ಬರುವುದಿಲ್ಲ. ಆದರೆ ಭೂಮಿಯ ದ್ರವ್ಯರಾಶಿಗೆ ಸರಿಸಮನಾದ ಗುರುತ್ವಬಲ ನಿಮ್ಮ ಜೊತೆ ಎಷ್ಟಿರುತ್ತದೆ ಗೊತ್ತೇ? ಜಾರಿ ಬಿದ್ದಾಗ ನೋವಾಗುತ್ತದಲ್ಲ ಅಷ್ಟು….! ಇನ್ನು ಮರದಲ್ಲಿರುವ ತೆಂಗಿನಕಾಯಿ ಮತ್ತು ಭೂಮಿಯ ಮಧ್ಯೆ ಗುರುತ್ವ ಬಲ ಎಷ್ಟಿರುತ್ತದೆ ಎಂದರೆ ಕಾಯಿ ಬೀಳುವಾಗ ಅದರಡಿಗೆ ನಿಂತಿದ್ದವರನ್ನು ಕೇಳಿನೋಡಿ.
ಈಗ ಗುರುತ್ವ ಬಲದ ಬಗ್ಗೆ ನಿಮಗೊಂದು ಅಂದಾಜು ಸಿಕ್ಕಿದೆ ಅಂದುಕೊಳ್ಳೋಣ. ಇಂತಹ ಬಲದ ಪರಿಣಾಮದಿಂದಲೇ ಚಂದ್ರ ಭೂಮಿಯನ್ನು, ಭೂಮಿ ಸೂರ್ಯನನ್ನು ಸುತ್ತುತ್ತಿರುವುದು ಹಾಗೆಯೇ ಉಳಿದ ಗ್ರಹಗಳು ಧೂಮ ಕೇತುಗಳು ಸೂರ್ಯನನ್ನು ಸುತ್ತುತ್ತಿರುವುದು ಸೂರ್ಯನ ಅಗಾಧ ಗುರುತ್ವ ಬಲಕ್ಕೆ ಎಲ್ಲಾ ಗ್ರಹಗಳೂ ಒಳಪಟ್ಟು ನಮ್ಮ ಸೌರವ್ಯೂಹವನ್ನು ರಚಿಸಿವೆ. ಇನ್ನು ಕೆಲವು ಗ್ರಹಗಲು ತಮ್ಮ ಬಲ ತೋರಿಸಲು ಕೆಲವು ಉಪಗ್ರಹಗಳು  ತಮ್ಮನ್ನು ಸುತ್ತುವಂತೆ ಮಾಡಿಕೊಂಡಿವೆ. ಸಣ್ಣ ಸಣ್ಣ ಕಣಗಳಿಂದ ದೈತ್ಯ ಕಾಯಗಳವರೆಗೂ ಸಾರ್ವತ್ರಿಕವಾಗಿ ಗುರುತ್ವ ನಿಯಮ ಅನ್ವಯವಾಗುತ್ತದೆ. ಇವೆಲ್ಲವನ್ನೂ ನ್ಯೂಟನ್ ತನ್ನ ‘ನೈಸರ್ಗಿಕ ತತ್ವಶಾಸ್ತ್ರದ ಗಣಿತೀಯ ನಿಯಮಗಳು’ ಎಂಬ ಗ್ರಂಥದಲ್ಲಿ ಬರೆದಿದ್ದಾನೆ. ಸಂಕ್ಷಿಪ್ತವಾಗಿ ಅದನ್ನು ‘ಪ್ರಿನ್ಸಿಪಿಯಾ’ ಎಂದೂ ಕರೆಯುತ್ತಾರೆ. ಹೀಗೆ ಒಂದು ಸೇಬುಹಣ್ಣಿನ ಕಥೆ ವಿಶ್ವದ ರೂಪ ರಚನೆಯ ನಿಗೂಢತೆಯನ್ನು ಬಯಲಿಗೆಳೆದಿದೆ ಎಂದರೆ ತಪ್ಪಾಗಲಾರದೇನೋ…! 

ಗುರುತ್ವದ ಅಂಕಿತವಿರಬಹುದೇನೋ..? ಬ್ರಹ್ಮನೆಂಬ ಹೆಸರು…

’ಕಾಲು ಜಾರಿದರೆ ಸೊಂಟ ಮುರಿಯುತ್ತದೆ’ ಎಂಬುವುದರಿಂದ ಹಿಡಿದು ’ಆಕಾಶಕ್ಕೆ ಉಗಿದರೆ ಮುಖಕ್ಕೆ ಬೀಳುತ್ತದೆ’ ಎಂಬ ಮಾತುಗಳನ್ನೆಲ್ಲಾ ಕೇಳಿಸಿಕೊಳ್ಳುತ್ತಿದ್ದರೆ, ಮೇಲಿದ್ದ ವಸ್ತು ಅಥವಾ ಮೇಲಕ್ಕೆಸೆದ ವಸ್ತು ಕೆಳಗೇ ಬೀಳಬೇಕು ಅನ್ನುವುದು ಎಷ್ಟೊಂದು ಸಹಜಕ್ರಿಯೆಯಲ್ಲವೇ ಎನಿಸಿಬಿಡುತ್ತದೆ. ನಾವು ಹುಟ್ಟಿದಾಗಿನಿಂದಲೂ ನೋಡುತ್ತಿರುವ, ನಾವು ಆಗಬಾರದೆಂದುಕೊಂಡರೂ ಆಗೇ ಆಗುವ ಹಲವು ಕ್ರಿಯೆಗಳಲ್ಲಿ ಇದೂ ಒಂದಾದ್ದರಿಂದ, ಇಂತಹ ವಿಷಯಗಳು ನಮ್ಮ ಕುತೂಹಲದಿಂದ ಪ್ರಾಯಶಃ ದೂರ ಸರಿದು ಬಿಟ್ಟಿವೆ. ಆದರೆ ನ್ಯೂಟನ್ ಎಂಬ ಭೌತಶಾಸ್ತ್ರಜ್ಞ ನಮ್ಮ ಹಾಗೆ ಸಹಜವಾಗಿ ನೋಡದೆ ಆ ಕ್ರಿಯೆಯಲ್ಲಿ ಅಡಗಿಕೊಂಡಿದ್ದ ವಿಶೇಷತೆಯನ್ನು ಹುಡುಕಿಕೊಟ್ಟ. ಆತ ಒಮ್ಮೆ ತನ್ನ ತೋಟದಲ್ಲಿ ಕೂತಿದ್ದಾಗ ಮರದಿಂದ ಬೀಳುತ್ತಿದ್ದ ಸೇಬು ಹಣ್ಣನ್ನು ನೋಡಿ ಅದನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ದ್ರವ್ಯರಾಶಿಯುಳ್ಳ ಪ್ರತಿಯೊಂದು ವಸ್ತುವೂ ದ್ರವ್ಯರಾಶಿಯುಳ್ಳ ಪ್ರತೀ ಮತ್ತೊಂದು ವಸ್ತುವನ್ನು ’ಗುರುತ್ವಾಕರ್ಷಣೆ’ ಎಂಬ ಬಲದಿಂದ ಆಕರ್ಷಿಸುತ್ತದೆ ಎಂದು ತೋರಿಸಿಕೊಟ್ಟ, ಈ ವಿಜ್ಞಾನ ಲೋಕದ ಹಲವು ಮಹತ್ವದ ಆವಿಷ್ಕಾರಗಳಿಗೆ ಇದು ಮುನ್ನುಡಿಯಾಯಿತು. ಇದನ್ನೇ ನ್ಯೂಟನ್‌ನ ’ಸಾರ್ವತ್ರಿಕ ಗುರುತ್ವ’ ನಿಯಮ ಎಂದು ಕರೆಯುತ್ತಾರೆ. ನ್ಯೂಟನ್ ಹೇಳಿದಂತೆ ಅಗಾಧ ದ್ರವ್ಯರಾಶಿಯುಳ್ಳ ಭೂಮಿಯನ್ನೇ ಒಂದು ವಸ್ತುವೆಂದೂ, ಇನ್ನೊಂದು ವಸ್ತುವಾಗಿ ಮರದಲ್ಲಿ ಹಣ್ಣಾಗಿ ಕೂತಿರುವ, ತೊಟ್ಟು ಮೃದುವಾಗಿ ಇನ್ನೇನು ಬೀಳಲಿರುವ ಸೇಬುವೊಂದನ್ನು ಪರಿಗಣಿಸಿಕೊಳ್ಳೋಣ. ಅತೀ ಸಮೀಪದಲ್ಲಿರುವ ಆ ಸೇಬು ಹಣ್ಣನ್ನು ಭೂಮಿಯು ಗುರುತ್ವ ಬಲದಿಂದ ತನ್ನೆಡೆಗೆ ಸೆಳೆಯುತ್ತಿರುತ್ತದೆ. ಯಾವಾಗ ತೊಟ್ಟಿನಲ್ಲಿರುವ ಗಟ್ಟಿತನ ಕಡಿಮೆಯಾಗುತ್ತದೋ ಆಗ ಆ ತೊಟ್ಟನ್ನೇ ಮುರಿದುಕೊಂಡು ಭೂಮಿಯೆಡೆಗೆ ಜಿಗಿದುಬಿಡುತ್ತದೆ. ಹಾಗಾದರೆ ಯೋಚಿಸಿ ಬಾಳೆಹಣ್ಣಿನ ಸಿಪ್ಪೆ ಮೆಟ್ಟಿ ನೀವೇನಾದರೂ ಕೆಳಕ್ಕೆ ಬಿದ್ದರೆ ಮೊದಲು ಬೈಯಬೇಕಾದ್ದು ಯಾರನ್ನು ಎಂದು.
ಅಯ್ಯೋ ಹಾಗಾದರೆ ಈ ಗುರುತ್ವ ಬಲ ಇಲ್ಲದಿದ್ದರೆ ಯಾರೂ ಬೀಳುತ್ತಲೇ ಇರಲಿಲ್ಲವಲ್ಲ ಎಂದು ಯೋಚಿಸುವ ಗೋಜಿಗೆ ಹೋಗಬೇಡಿ, ಏಕೆಂದರೆ ಈ ಗುರುತ್ವ ಬಲದಿಂದಲೇ ನಾವೂ ನೀವೂ ಭೂಮಿಗೆ ಅಂಟಿಕೊಂಡಿರುವುದು, ಗ್ಯಾರೇಜಿನಲ್ಲಿ ಬಿದ್ದಿರುವ ಆಯಸ್ಕಾಂತಕ್ಕೆ ಕಬ್ಬಿಣದ ಪುಡಿ ಅಂಟಿರುತ್ತದಲ್ಲ ಹಾಗೆ. ಒಂದು ವೇಳೆ ಭೂಮಿಗೇನಾದರು ಗುರುತ್ವಾಕರ್ಷಣ ಶಕ್ತಿ ಇಲ್ಲದಿದ್ದಿದ್ದರೆ. ನಾವೆಲ್ಲಾ ಗಾಳಿಯಲ್ಲಿ ಹಾರಾಡುತ್ತಾ ಇರುತ್ತಿದ್ದೆವು. ಅಮೇರಿಕಾ, ದುಬೈಗಳಿಗೆ ಹೋಗಲು ವಿಮಾನಗಳೇ ಬೇಕಾಗುವುದಿಲ್ಲ ಆದರೆ ಒಂದೇ ಒಂದು ತಾಂತ್ರಿಕ ದೋಷವೇನು ಗೊತ್ತೇ? ನಾವು ಹಾರುತ್ತೇವೆ ಎನ್ನುವುದು ಎಷ್ಟು ನಿಜವೋ ನೆಲದ ಮೇಲೆ ಇಳಿಯಲು ಆಗುವುದಿಲ್ಲ ಎನ್ನುವುದೂ ಅಷ್ಟೇ ಸತ್ಯ. ವಿದೇಶಕ್ಕೆ ಹೋಗಿ ಇಳಿಯಲಾಗುವುದಿಲ್ಲ ಗಾಳಿಯಲ್ಲಿಯಾದರೂ ಈಜಾಡೋಣ ಅಂದರೆ ಅದೂ ಆಗುವುದಿಲ್ಲ ಯಾಕೆಂದರೆ, ಈ ನಮ್ಮ ಗಾಳಿ ಅಥವಾ ವಾತಾವರಣ ಉಂಟಾಗಿರುವುದು ಸಹ ಈ ಗುರುತ್ವ ಬಲದಿಂದಲೆ.
ವಾತಾವರಣ ಅಂದರೆ ಗಾಳಿಯ ಪದರ ಭೂಮಿಯನ್ನು ಅಪ್ಪಿ ಹಿಡಿದುಕೊಂಡಿರುವುದಕ್ಕೆ ಕಾರಣ ಭೂಮಿ ಮತ್ತು ಗಾಳಿಯ ಕಣಗಳ ನಡುವೆ ಇರುವ ಗುರುತ್ವ ಬಲದಿಂದ, ಆ ಬಲದಿಂದಲೇ ಫುಟ್ಬಾಲ್‌ಗೆ ಸವರಿದ ತೆಳುವಾದ ಬಣ್ಣದಷ್ಟು ದಪ್ಪವಾಗಿ ಭೂಮಿಗೆ ವಾತಾವರಣದ ಹೊದಿಕೆ ಉಂಟಾಗಿದೆ. ಗುರುತ್ವ ವಿಲ್ಲವೆಂದರೆ, ಗಾಳಿಯೂ ಇಲ್ಲ, ಗಾಳಿ ಇಲ್ಲದಿದ್ದರೆ ವಾತಾವರಣವೂ ಇಲ್ಲ ಹಾಗೆಯೇ ನಾವೂ ಇಲ್ಲ, ನೀವೂ ಇಲ್ಲ. ಈಗ ಹೇಳಿ ಗುರುತ್ವ ಬೇಕೆ ಬೇಡವೇ ಎಂದು ?
ನ್ಯೂಟನ್ನನ ಕಾಲದವನೇ ಆದ ಗೆಲಿಲಿಯೋ ಗೆಲಿಲಿ ಎಂಬ ಇಟಲಿಯ ಭೌತಶಾಸ್ತ್ರಜ್ಞನೊಬ್ಬ ಪೀಸಾದಲ್ಲಿರುವ ವಾಲುವ ಗೋಪುರದ ತುದಿಯಲ್ಲಿ ನಿಂತು ಒಂದು ಸಣ್ಣಕಲ್ಲು ಮತ್ತೊಂದು ದೊಡ್ಡಕಲ್ಲನ್ನು ಒಟ್ಟಿಗೆ ಕೆಳಕ್ಕೆ ಬಿಡುತ್ತಾನೆ. ಎರೆಡೂ ಕಲ್ಲುಗಳೂ ಒಟ್ಟಿಗೆ ನೆಲವನ್ನು ಸ್ಪರ್ಷಿಸುತ್ತವೆ. ಇದನ್ನು ಗಮನಿಸಿದ ಗೆಲಿಲಿಯೋ, ಎಲ್ಲಾ ವಸ್ತುಗಳು ಭೂಮಿಯೆಡೆಗೆ ಬೀಳುವಾಗ ಒಂದೇ ಸ್ಥಿರಪ್ರಮಾಣದಲ್ಲಿ ತಮ್ಮ ವೇಗವನ್ನು ಸಮಯಕ್ಕನುಗುಣವಾಗಿ ಹೆಚ್ಚಿಸಿಕೊಳ್ಳುತ್ತವೆ, ಹಾಗೂ ಆ ಪ್ರಮಾಣವು ಬೀಳುತ್ತಿರುವ ವಸ್ತುವಿನ ದ್ರವ್ಯರಾಶಿಯ  ಮೇಲೆ ಅವಲಂಬಿತವಾಗಿರುವುದಿಲ್ಲ ಎಂದು ಘೋಷಿಸುತ್ತಾನೆ. ಇದನ್ನು ನ್ಯೂಟನ್ ತನ್ನ ಗುರುತ್ವ ನಿಯಮದ ಪ್ರಕಾರ ಸಮರ್ಥಿಸುತ್ತಾನೆ,  ಆ ಸ್ಥಿರ ಪ್ರಮಾಣದಲ್ಲಿ ಸಮಯಕ್ಕನುಗುಣವಾಗಿ ಹೆಚ್ಚುವ ವೇಗವನ್ನು ಗುರುತ್ವ ವೇಗೋತ್ಕರ್ಷ ಎಂದು ಕರೆಯುತ್ತಾನೆ ಹಾಗು ಅದೇ ನಿಯಮದ ಪ್ರಕಾರ ಭೂಮಿಯ ಮೇಲೆ ಬೀಳುವ ಪ್ರತೀ ವಸ್ತುವು ಈ ಗುರುತ್ವ ವೇಗೋತ್ಕರ್ಷದ ಪ್ರಭಾವದಿಂದ ತನ್ನ ವೇಗವನ್ನು ಪ್ರತೀ ಸೆಕೆಂಡಿಗೆ ೧೦ ಮಾನಗಳಷ್ಟು ಹೆಚ್ಚಿಸಿಕೊಳ್ಳುತ್ತದೆ. 
ಅಂದರೆ ಭೂಮಿಯ ಗುರುತ್ವ ವೇಗೋತ್ಕರ್ಷವನ್ನು ಹೆಚ್ಚೂ ಕಡಿಮೆ ೧೦ ಮೀಟರ್ ಪರ್ ಸೆಕೆಂಡ್ ಸ್ಕ್ಟಾಯರ್ ( 10ms-2) ಎಂದು ಅಂದಾಜಿಸಬಹುದು ( ನಿಖರವಾಗಿ 9.8ms-2), ಇದು ಬೀಳುವ ವಸ್ತುವಿನ ದ್ರವ್ಯರಾಶಿಗೆ ಅವಲಂಬಿತವಾಗಿರುವುದಿಲ್ಲ ಆದರೆ ಭೂಮಿಯ ದ್ರವ್ಯರಾಶಿ ಮತ್ತು ತ್ರಿಜ್ಯದ ಮೇಲೆ ಅವಲಂಬಿತವಾಗಿದೆ.
ಇದನ್ನು ಪ್ರಾಯೋಗಿಕವಾಗಿ ಮಾಡಲು ಸ್ವಲ್ಪ ಕಷ್ಟ, ಏಕೆಂದರೆ ಗಾಳಿಯು ಬೀಳುತ್ತಿರುವ ವಸ್ತುವಿನ ಮೇಲೆ ಪ್ರತಿರೋಧದ ಪ್ರಭಾವ ಬೀರುತ್ತದೆ, ಆದ್ದರಿಂದ ಈ ಪ್ರಯೋಗವನ್ನು ನಿರ್ವಾತದಲ್ಲಿ ಮಾಡಿದರೆ ನಿರೀಕ್ಷಿತ ಫಲಿತಾಂಶ ಪಡೆಯಬಹುದು. ಒಟ್ಟಾರೆಯಾಗಿ ಹೇಳಬೇಕೆಂದರೆ ಒಂದು ನಾಣ್ಯ ಹಾಗು ಒಂದು ಗರಿಯನ್ನು ನಿರ್ವಾತದಲ್ಲಿ ಬಿಟ್ಟರೆ ಅವು ಏಕ ಕಾಲದಲ್ಲಿ ನೆಲ ಮುಟ್ಟುವವು, ನಂಬಲು ಕಷ್ಟ ಆದರೂ ಸತ್ಯ; ಏಕೆ ಎಂದು ಈ ಮೊದಲೇ ಹೇಳಲಾಗಿದೆ.
ದ್ರವ್ಯರಾಶಿ ಮತ್ತು ತೂಕ ಎರೆಡೂ ಒಂದೇ ತರಹದವುಗಳೆಂದು ಪ್ರಾಥಮಿಕ ಹಂತದಲ್ಲಿ ಹೇಳಬಹುದಾದರೂ ಅವುಗಳ ಮಧ್ಯೆ ಬಹಳ ವ್ಯತ್ಯಾಸವಿದೆ.  ದ್ರವ್ಯರಾಶಿಯೆಂದರೆ ಒಂದು ನಿರ್ದಿಷ್ಟ ಸ್ಥಳಾವಕಾಶದಲ್ಲಿ ಸೇರಿಸಿಡಬಹುದಾದ ದ್ರವ್ಯದ ಪ್ರಮಾಣ. ಇದು ಸ್ಥಳಾವಕಾಶ ಮತ್ತು ವಸ್ತುವಿನ ಸಾಂದ್ರತೆಯ ಮೇಲೆ ಮಾತ್ರ ಅವಲಂಬಿತವಾಗಿದೆ. ಉದಾಹರಣೆಗೆ ನಿಮ್ಮ ಮುಷ್ಟಿಯಲ್ಲಿ ಹಿಡಿಯ ಬಹುದಾದ ಗೋಲಿಗಳ ಸಂಖ್ಯೆ ಅದನ್ನು ಗಾಳಿಯಲ್ಲಿ ಹಿಡಿದರೂ ನೀರಿನಲ್ಲಿ ಹಿಡಿದರೂ ಬದಲಾಗುವುದಿಲ್ಲ. ಹಾಗಾಗಿ ಒಂದು ವಸ್ತವಿನ ಆಕಾರ ಬದಲಾಯಿಸದೆ ವಿಶ್ವದ ಯಾವುದೇ ಜಾಗಕ್ಕೆ ಒಯ್ದರೂ ಅದರ ದ್ರವ್ಯರಾಶಿ ಬದಲಾಗುವುದಿಲ್ಲ. ತೂಕವೆಂದರೆ ವಸ್ತುವಿನ ದ್ರವ್ಯರಾಶಿ ಮತ್ತು ಅದರ ಮೇಲೆ ಬೀಳುವ ಗುರುತ್ವ ಶಕ್ತಿಯ ಪ್ರಭಾವದ ಒಂದು ಅಳತೆ. ಭೂಮಿ ಒಂದು ವಸ್ತುವನ್ನು ತನ್ನೆಡೆಗೆ ಎಷ್ಟು ಬಲದಿಂದ ಎಳೆದು ಕೊಳ್ಳುತ್ತದೆ ಎಂದು ಅಳೆದರೆ ಅದು ಭೂಮಿಯ ಮೇಲೆ ಆ ವಸ್ತುವಿನ ತೂಕ, ವಸ್ತುವಿನ ದ್ರವ್ಯರಾಶಿಯನ್ನು ಗುರುತ್ವ ವೇಗೋತ್ಕರ್ಷದಿಂದ ಗುಣಿಸಿದಾಗ ತೂಕದ ಮೌಲ್ಯ ದೊರೆಯುತ್ತದೆ. ವೇಗೋತ್ಕರ್ಷ ಭೂಮಿಯ ತ್ರಿಜ್ಯ ಮತ್ತು ದ್ರವ್ಯರಾಶಿಯನ್ನು ಅವಲಂಬಿಸಿರುವುದರಿಂದ, ಬೇರೆ ಗ್ರಹಗಳಲ್ಲಿ ಇದು ಆ ಗ್ರಹದ ದ್ರವ್ಯರಾಶಿ ಮತ್ತು ಆಕಾರಕ್ಕನುಗುಣವಾಗಿ ಬದಲಾಗುತ್ತದೆ, ಅದರೊಂದಿಗೆ ವಸ್ತುವಿನ ತೂಕವೂ ಬದಲಾಗುತ್ತದೆ. ಅಂದರೆ ದ್ರವ್ಯರಾಶಿ ಗುರುತ್ವ ಬಲದಿಂದ ಸ್ವತಂತ್ರವಾದದ್ದು. ಆದರೆ ತೂಕ ಗುರುತ್ವ ಬಲದಿಂದಲೇ ನಿರ್ಧರಿತವಾಗುವಂತದ್ದು. ಆದ್ದರಿಂದ ತೂಕವೂ ಒಂದು ರೀತಿಯ ಬಲ ಎಂದು ಹೇಳಬಹುದು.
ಗೆಲಿಲಿಯೋ ಪ್ರಯೋಗದ ಬಗ್ಗೆ ಹೇಳುವಾಗ ಪೀಸಾದ ವಾಲುವ ಗೋಪುರದ ಹೆಸರು ಕೇಳಿದಾಗ ಅರೇ ಅದು ಏಕೆ ವಾಲಿದೆ? ವಾಲಿದ ಮೇಲೆ ಗುರುತ್ವ ಬಲದಿಂದ ಕೆಳಕ್ಕೆ ಬೀಳಬೇಕಲ್ಲವೇ ? ಎಂದು ನಿಮ್ಮಲ್ಲೇನಾದರೂ ಪ್ರಶ್ನೆ ಹುಟ್ಟುತ್ತಿದ್ದರೆ. ಇದ್ದಕ್ಕೆ ಉತ್ತರವೇ ಗುರುತ್ವಕೇಂದ್ರ. ಒಂದು ವಸ್ತುವಿನ ಸಂಪೂರ್ಣ ತೂಕ ಅಥವಾ ಭಾರ ಕೇಂದ್ರೀಕೃತವಾಗಿರುವ ಬಿಂದುವನ್ನು ಆ ವಸ್ತುವಿನ ಗುರುತ್ವಕೇಂದ್ರ ಎಂದು ಕರೆಯುತ್ತಾರೆ. ಉದಾಹರಣೆಗೆ ನಮ್ಮಲ್ಲಿ ಕಾಲೇಜು ಹುಡುಗರು ನೋಟ್ ಪುಸ್ತಕವನ್ನು ಒಂದೇ ಬೆರಳಿನಲ್ಲಿ ಹಿಡಿದು ತಿರುಗಿಸುತ್ತಾರಲ್ಲ, ಹಾಂ! ಆ ಬೆರಳು ಇಟ್ಟ ಜಾಗವಿದೆಯಲ್ಲಾ, ಅದೇ ಆ ಪುಸ್ತಕದ ಗುರುತ್ವಕೇಂದ್ರ., ಇದನ್ನು ಇನ್ನು ಸುಲಭವಾಗಿ ತಿಳಿಯಬೇಕೆಂದರೆ ಒಂದು ಸ್ಕೇಲನ್ನು ಅಡ್ಡವಾಗಿ ಹಿಡಿದರೆ ಅದರ ಗುರುತ್ವ ಕೇಂದ್ರ ಸರಿಯಾಗಿ ಅದರ ಮಧ್ಯ ಭಾಗದಲ್ಲಿರುತ್ತದೆ. 
ಈಗ ಒಂದು ಪ್ರಯೋಗ ಮಾಡೋಣ, ಸುಮಾರು ನಿಮ್ಮ ಮೊಣಕಾಲಿನವರೆಗೆ ಬರುವ ಕಟ್ಟೆಯ ಮೇಲೆ ಬೆನ್ನನ್ನು ನೇರ ಮಾಡಿ, ಪಾದಗಳನ್ನು ಸಂಪೂರ್ಣ ನೆಲಕ್ಕೆ ಮುಟ್ಟಿಸಿ ಕುಳಿತುಕೊಳ್ಳಿ , ಈಗ ಕೈಗಳ ಸಹಾಯವಿಲ್ಲದೆ, ದೇಹವನ್ನು ಭಾಗಿಸದೆ ಎದ್ದು ನಿಲ್ಲಿ….!  ಎದ್ದಿದ್ದೀರಾ…? ಖಂಡಿತಾ ಸಾಧ್ಯವಿಲ್ಲ.. ಏಕೆಂದರೆ ಮನುಷ್ಯನ ಗುರುತ್ವಕೇಂದ್ರ ಆತನ ಬೆನ್ನು ಮೂಳೆಯ ಕೆಳಕ್ಕೆ ಇರುತ್ತದೆ. ಅದರಿಂದ ನೆಲಕ್ಕೆ ಎಳೆದ ಲಂಬ ರೇಖೆಯಲ್ಲಿ ನಿಮ್ಮ ಪಾದಗಳ ಮಧ್ಯಬಿಂದು ಮತ್ತು ತಲೆ ಇಲ್ಲದಿದ್ದರೆ ನಿಮ್ಮ ದೇಹವನ್ನು ನಿಲ್ಲಿಸುವುದು ಕಷ್ಟ. ನೀವು ಕೂತಿದ್ದಾಗ ನಿಮ್ಮ ಗುರುತ್ವಕೇಂದ್ರ ಮತ್ತು ಕಾಲುಗಳ ನೆಲಕ್ಕೆಳೆದ ಲಂಬರೇಖೆಯಲ್ಲಿರಲಿಲ್ಲ ಯಾರಾದರೂ ಕುರ್ಚಿಯನ್ನು ಎಳೆದಿದ್ದರೆ, ನಿಮ್ಮ ಗುರುತ್ವಕೇಂದ್ರ ನೇರವಾಗಿ ನೆಲದಲ್ಲಿರುತ್ತಿತ್ತು. ಅಂದರೆ ನೀವು ಕೂತಲ್ಲಿಂದ ಏಳಬೇಕಾದರೆ ನಿಮ್ಮ ಕಾಲುಗಳನ್ನು ಗುರುತ್ವಕೇಂದ್ರದ ಅಡಿಗೆ (ಅಂದರೆ ಕುರ್ಚಿಯ ಅಡಿಗೆ) ತರಬೇಕು ಅಥವಾ ನಿಮ್ಮ ದೇಹವನ್ನು ಮುಂದಕ್ಕೆ ಭಾಗಿಸಿ ದೇಹದ ಭಾರ ಕಾಲುಗಳ ನೇರಕ್ಕೆ ಕೇಂದ್ರಿಕರಿಸುವಂತೆ ಮಾಡಿ ಎದ್ದುನಿಲ್ಲಬೇಕು.
ಅಂದರೆ ಯಾವ ಆಕೃತಿಯಲ್ಲಿ ಗುರುತ್ವಕೇಂದ್ರದಿಂದ ನೆಲಕ್ಕೆ ಎಳೆದ ಲಂಬರೇಖೆಯಲ್ಲಿರುವ ರಚನೆಗಳು ಬಲಾಢ್ಯವಾಗಿರುತ್ತವೆಯೋ ಅಂತಹ ಆಕೃತಿಗಳ ಆಕಾರ ಏನೇ ಇದ್ದರೂ ಅವು ಬೀಳದೇ ಸ್ಥಿರವಾಗಿ ನಿಲ್ಲಬಲ್ಲವು. ಪೀಸಾದ ಗೋಪುರವೂ ಇದೇ ರೀತ್ಯಾ ವಿನ್ಯಾಸವನ್ನು ಹೊಂದಿದೆ. ನಾವೇನಾದರು ತಲೆಕೆಳಗಾಗಿ ಒಂದೇ ಕೈಯ ಮೇಲೆ ನಿಂತರೆ ನಮ್ಮ ಗುರುತ್ವ ಕೇಂದ್ರ ಸೊಂಟಭಾಗದಲ್ಲಿಲ್ಲದೆ ಆ ಕೈಯ ಭುಜ ಭಾಗದಲ್ಲಿರುತ್ತದೆ. ಕೊಡಪಾನವನ್ನು ತಲೆಯ ಮೇಲೆ ಹೊತ್ತವರು ಸುಂದರವಾಗಿ ಬೆಕ್ಕಿನ ನಡಿಗೆ ನಡೆಯುವುದೂ ಇದೇ ಕಾರಣಕ್ಕಾಗಿ ಅಲ್ಲವೇ…! ಯೋಚಿಸಿ ನೋಡಿ.
ಹೀಗೆ ಬಗೆಯುತ್ತಾ ಹೋದಷ್ಟು ಗುರುತ್ವ ಶಕ್ತಿಯ ವ್ಯಾಪ್ತಿ ಬೆಳೆಯುತ್ತಲೇ ಹೋಗುತ್ತದೆ. ಮನುಷ್ಯನ ದೇಹದೊಳಗೆ ಹೃದಯವೆಂಬ ಪುಟ್ಟ ಮೋಟಾರ್‌ಗೆ ರಕ್ತ ಪರಿಚಲನೆಯಲ್ಲಿ ಅತಿ ಹೆಚ್ಚು ಸಹಕಾರ ನೀಡಿ ಮನುಷ್ಯನ ಜೀವಿತಕ್ಕೆ ಕಾರಣವಾಗಿ, ಆತ ತಿಂದದ್ದು ಜೀರ್ಣವಾಗಿ ಹೊರಗೆ ಹೋಗುವವರೆಗೂ ಗುರುತ್ವ ಶಕ್ತಿಯ ಪಾತ್ರವಿದೆ ಎಂಬುದನ್ನು ಜೀವಶಾಸ್ತ್ರದಲ್ಲಿ ಎಳೆ ಎಳೆಯಾಗಿ ಬಿಡಿಸಿಡಲಾಗಿದೆ. ಒಮ್ಮೆ ನಾವು ಗುರುತ್ವದಿಂದ ಹೊರನಡೆದರೆ ನಮ್ಮ ದೇಹದಲ್ಲಿನ ಸಂಪೂರ್ಣ ನಿಯಂತ್ರಣ ದಿಕ್ಕೆಟ್ಟು ಬಿಡುತ್ತದೆ. ಇಡೀ ದೇಹದ ರಕ್ತ ಪರಿಚಲನೆ ಹೆಂಡ ಕುಡಿದ ಮಂಗನಂತಾಗಿಬಿಡುತ್ತದೆ. ಒಮ್ಮೆ ಇದೆಲ್ಲವನ್ನು ತಡೆದುಕೊಂಡು ಬದುಕಿದ್ದೇವೆ ಎಂದಿಟ್ಟುಕೊಳ್ಳಿ, ಆಕಾಶದಲ್ಲಿ ತಲೆ ಕೇಳಗಾಗಿ ಕೈಯೊಂದು ದಿಕ್ಕಿಗೆ ಕಾಲೊಂದು ದಿಕ್ಕಿಗೆ ಹಾಕಿಕೊಂಡು ಆಕಾಶದಲ್ಲಿ ದಾರ ಹರಿದ ಗಾಳಿಪಟದಂತೆ ಅನಂತ ವಿಶ್ವದಲ್ಲೆಲ್ಲೋ ತೇಲಾಡುತ್ತಾ ಇರುತ್ತೇವೆ. ಇನ್ನು ವಾತಾವರಣವೇ ಇಲ್ಲದ್ದರಿಂದ ಮೋಡಗಳ ರಚನೆಯಾಗಲಿ, ಅವುಗಳ ತೇಲುವಿಕೆಯಾಗಲಿ, ಅದರಿಂದ ಮಳೆಯಾಗಲಿ ಸಾದ್ಯವಿಲ್ಲವಾಗುತ್ತದೆ. ಇನ್ನು ಗುರುತ್ವವಿಲ್ಲದ್ದರಿಂದ ಸಮುದ್ರ ನದಿಗಳಲ್ಲಿ ನೀರಿರಲು ಸಾಧ್ಯವಿಲ್ಲ. ಅಂತರ್ಜಲವಿದ್ದರೂ ಎಷ್ಟು ದಿನ, ಹಾಗಾಗಿ ಸಸ್ಯಗಳೂ ಬದುಕಲಾರವು. ಸಸ್ಯಗಳಿಲ್ಲದೆ ಸಸ್ಯಾಹಾರಿಗಳೆಲ್ಲಿ, ಅವಿಲ್ಲದೆ ಮಾಂಸಾಹಾರಿಗಳೆಲ್ಲಿ? ಅಂದರೆ ಒಟ್ಟಾರೆಯಾಗಿ ಭೂಮಿಗೆ ಗುರುತ್ವ ಶಕ್ತಿ ಇಲ್ಲವೆಂದರೆ ಅರ್ಥ ಭೂಮಿಯಲ್ಲಿ ಜೀವಿಗಳಿರಲು ಸಾಧ್ಯವೇ ಇಲ್ಲ ಎಂದು. ಇನ್ನು ವಿಶ್ವದಲ್ಲೆಲ್ಲೂ ಗುರುತ್ವ ಶಕ್ತಿ ಇರಲಿಲ್ಲವೆಂದರೆ…? ಸರಿಯಾಗಿ ಹೇಳಬೇಕೆಂದರೆ ಆ ವಿವರಣೆ ಊಹೆಗೂ ನಿಲುಕದ್ದು.. ಏಕೆಂದರೆ ಗುರುತ್ವ ಶಕ್ತಿ ಇಲ್ಲವೆಂದರೆ ವಿಶ್ವ, ಸೌರಮಂಡಲ, ಭೂಮಿ ಎಂಬೆಲ್ಲಾ ಪದಗಳು ನಮ್ಮ ಅಂಕೆಗೂ ಮೀರಿ ಅರ್ಥ ಕಳೆದುಕೊಂಡು ಬಿಡುತ್ತವೆ. ಅಷ್ಟು ಬಿಗಿಮುಷ್ಠಿಯಲ್ಲಿ ಇಡೀ ವಿಶ್ವದ ಆಗುಹೋಗುಗಳೆಲ್ಲವೂ ಗುರುತ್ವ ಬಲದಿಂದ ಆಳಲ್ಪಡುತ್ತಿವೆ. ಆದ್ದರಿಂದಲೇ ಗುರುತ್ವಕ್ಕೆ ಮತ್ತು ನ್ಯೂಟನ್‌ಗೆ ಸಾರ್ವತ್ರಿಕ ಮನ್ನಣೆ ದೊರೆತಿರುವುದು. 
ಇದೆಲ್ಲವನ್ನೂ ಕೇಳಿದಾಗ ಅನಿಸುತ್ತದೆಯಲ್ಲವೇ, ಪುರಾಣಗಳಲ್ಲಿ ಹೇಳಿರುವ ಇಡೀ ವಿಶ್ವ, ಭೂಮಿ, ಅಲ್ಲಿನ ಜೀವಿ, ವಾತಾವರಣ, ಅದರಲ್ಲಿನ ಪಂಚಭೂತಗಳ ರಚನೆಯ ಕತೃ ಬ್ರಹ್ಮನೆಂಬ ಹೆಸರು ಪ್ರಾಯಶಃ ಈ ನಮ್ಮ ಗುರುತ್ವದ ಅಂಕಿತವಿರಬಹುದೇನೋ..? ಎಂದು.

ಭೌತ ವಿಜ್ಞಾನದ ಬೆನ್ನೇರಿ...,, ನಿಸರ್ಗದಲ್ಲೊಂದು ಸವಾರಿ.....

ಋಷಿ ವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ಜಸುವು ಜನಜೀವನಕೆ ಎಂದು ಡಿ.ವಿ.ಜಿಯವರು ’ಮಂಕುತಿಮ್ಮನ ಕಗ್ಗ’ ದಲ್ಲಿ ಹೇಳಿರುವಂತೆ ಯಾವ ಆಚರಣೆ, ಸಂಪ್ರದಾಯ ಮತ್ತು ತಿಳುವಳಿಕೆಗಳು ವಿಜ್ಞಾನದೊಂದಿಗೆ ಬೆಸೆಯುತ್ತವೆಯೋ ಅವುಗಳಿಂದ ಮಾತ್ರ ಮನುಕುಲದ ಉನ್ನತೀಕರಣ ಸಾಧ್ಯ. ಆದರೆ ಈ ವಿಜ್ಞಾನವನ್ನು ಜನರಿಗೆ ತಲುಪಿಸುವುದು ಪ್ರಯಾಸದ ಕೆಲಸ ಏಕೆಂದರೆ ಎಲ್ಲಾ ಜನರಿಗೂ ಇಂಗ್ಲೀಷ್ ಬರುವುದಿಲ್ಲ ; ವಿಜ್ಞಾನದ ಪದಗಳು ಕನ್ನಡದಲ್ಲಿ ಸಿಗುವುದೇ ಇಲ್ಲ ಎನ್ನುವುದು ಕೆಲವು ಜ್ಞಾನಿಗಳ ಆಂಬೋಣ. ಇಂತಹವರ ಬಗ್ಗೆ ಜಗದೀಶ್ಚಂದ್ರ ಬೋಸ್ ಹಿಂದೊಮ್ಮೆ ಹೇಳಿದ್ದರಂತೆ ನಿಮಗೆ ಬಂಗಾಳಿ ಬಾಷೆಯಲ್ಲಿ ವಿಜ್ಞಾನವನ್ನು ಹೇಳಲು ಅಸಾಧ್ಯ ಎಂದಾದರೆ ನಿಮಗೆ ಬೆಂಗಾಳಿ ಗೊತ್ತಿಲ್ಲ ಎಂದು ಅರ್ಥವಲ್ಲ ನಿಮಗೆ ವಿಜ್ಞಾನ ಗೊತ್ತಿಲ್ಲ ಎಂದರ್ಥ ಎಂದು, ಇದೇ ಮಾತು ಕನ್ನಡಕ್ಕೂ ಅನ್ವಯಿಸುತ್ತದೆ ಎಂದರೆ ಉತ್ಪ್ರೇಕ್ಷೆಯಾಗಲಿಕ್ಕಿಲ್ಲ. ಇರಲಿ ಬಿಡಿ, ’ಡೊಂಕು ಬಾಲದ ನಾಯಕರೇ ಲೋಕದ ಡೊಂಕ ನೀವೇಕೆ ತಿದ್ದುವಿರಿ’ ಎಂದು ಯಾರಾದರೂ ಹೇಳುವ ಮೊದಲೇ ನಾವು ವಿಜ್ಞಾನದ ಬಗ್ಗೆ ಇಂದಿನ ಈ ಲೇಖನದಲ್ಲಿ ಹಾಗೂ ಭೌತ ವಿಜ್ಞಾನದ ಬಗ್ಗೆ ನನ್ನ ಮುಂದಿನ ಲೇಖನಗಳಲ್ಲಿ ತಿಳಿದುಕೊಳ್ಳೋಣ, ನಮ್ಮ ಭಾಷೆಯಲ್ಲಿ.
ಯಾವುದೇ ಹೊಸ ಆವಿಷ್ಕಾರಗಳಾದಾಗ, ಹೊಸ ಹೊಸ ತಂತ್ರಜ್ಞಾನಗಳು ಜನ್ಮ ತಳೆದಾಗ ಅಥವಾ ಅವುಗಳ ಬಗ್ಗೆ ಯಾವೂದೋ ವಿಜ್ಞಾನದ ಪುಸ್ತಕಗಳನ್ನೋದುತ್ತಿರುವಾಗ ನಮ್ಮ ಗೆಳೆಯರ ಬಾಯಲ್ಲಿ ಹೆಚ್ಚಾಗಿ ನಾನು ಕೇಳಿದ್ದು, ಏನೇ ಹೇಳಿ ಈ ವಿಜ್ಞಾನ ಅನ್ನೊದು ತುಂಬಾ ಕುತೂಹಲದ ವಿಷಯ ಕಣ್ರೀ….. ಅನ್ನೊ ಮಾತನ್ನ, ಹೌದಲ್ಲವೇ..! ಕುತೂಹಲದಿಂದಲೇ ಹುಟ್ಟಿ ಕುತೂಹಲದಿಂದಲೇ ಬೆಳೆದು ಮತ್ತೆ ಕುತೂಹಲವನ್ನೇ ಬಿತ್ತುವ ವಿಸ್ಮಯ ವಿಷಯವೇನಾದರು ಇದೆ ಎಂದರೆ ಅದೇ ವಿಜ್ಞಾನ.

ಜೀವಕ್ಕೆಜೀವ ಜಲ ನೀಡಿ, ಅದಕೊಂದು ವಿನ್ಯಾಸ ಮಾಡಿ
ಭುವಿಯಲಿ ಮನುಜರಿಗೆ ಬದುಕನುಕೊಟ್ಟ
ನಿಸರ್ಗರಹಸ್ಯವನ್ನು ಬಿಚ್ಚಿ ಹೇಳುವವರಾರು
ಮಲಗಿದ್ದ ಮಿದುಳನ್ನು ಬಡಿದುಕರೆದೆಬ್ಬಿಸುವ
ನಿಮ್ಮೆಲ್ಲ ಪ್ರಶ್ನೆಗಳಿಗುತ್ತರಿಸಿ ಮೆರೆಯುವ
ವಿಜ್ಞಾನರಸದೌತಣಕ್ಕೆಜಯವೆನ್ನಿ …….
ಈ ಮೇಲಿನ ಸಾಲುಗಳೇ ಪ್ರಾಯಶಃ ನಿಮಗೆ ಅರ್ಥಮಾಡಿಸಿಬಿಡುತ್ತವೆ ವಿಜ್ಞಾ ಎಂದರೇನು? ಅದರ ಸೌಂದರ್‍ಯವೇನು? ಎಂಬುದನ್ನು. ಆದರೂ ವಿಜ್ಞಾನವನ್ನು ಇದು ಹೀಗೆಯೇ ಎಂದು ಹೇಳುವುದು ಸ್ವಲ್ಪ ಪ್ರಯಾಸದ ಕೆಲಸವೇ, ಯಾಕೆಂದರೆ ರಾಮಾಯಣದಲ್ಲಿ ಹಾರುವ ಪುಷ್ಪಕ ವಿಮಾನದಿಂದ ಹಿಡಿದು ಮೊನ್ನೆ ಮೊನ್ನೆ ನಾವು ಮಂಗಳಕ್ಕೆ ಹಾರಿಸಿದ ಉಪಗ್ರಹದವರೆಗೆ, ಅಡಿಗೆ ಮನೆಯಲ್ಲಿ ಅಜ್ಜಿ ಉಪ್ಪಿನಕಾಯಿಗೆ ಹಾಕುವ ಉಪ್ಪಿನಿಂದ ಹಿಡಿದು ಪಿಜ್ಜಾವನ್ನು ಸುತ್ತಿರುವ ಅಲ್ಯುಮಿನಿಯಂ ಪೊಟ್ಟಣದವರೆಗೆ, ಭಟ್ಟರ ಕೈಯಲ್ಲಿರುವ ತೀರ್ಥದಿಂದ ಹಿಡಿದು, ಭಯೋತ್ಪಾದಕರ ಕೈಯಲ್ಲಿರುವ ಬಂದೂಕಿನವರೆಗೆ ತನ್ನ ವೈವಿದ್ಯ ರೂಪಗಳಲ್ಲಿ ಇರುವುದೆಲ್ಲವೂ ವಿಜ್ಞಾನವೇ.
ಇಷ್ಟು ಸರಾಗವಾಗಿ ನಿಜ ಜೀವನದಲ್ಲಿ ಬೆರೆತ ಮೇಲೆ ವಿಜ್ಞಾನವನ್ನು ಒಂದು ವಿಷಯವಾಗಿ ಯಾಕೆ ಓದಬೇಕು? ಎನ್ನುವುದಾದರೆ ನೀವೇ ಯೋಚಿಸಿ, ನಿಮ್ಮ ಮಗ ಮಾಡುವ ಕೆಲಸ ಮತ್ತು ಎದುರು ಮನೆಯ ಹುಡುಗ ಮಾಡುವ ಕೆಲಸಗಳಲ್ಲಿ ಯಾವುದರ ಫಲವನ್ನು ನೀವು ಕರಾರುವಕ್ಕಾಗಿ ಊಹಿಸಬಲ್ಲಿರಿ ಮತ್ತು ಯಾಕೆ? ಖಂಡಿತಾ ನಿಮ್ಮ ಮಗನ ಕೆಲಸವನ್ನೆ ಏಕೆಂದರೆ ನೀವು ಆತನನ್ನು ನಿರಂತರವಾಗಿ, ತುಂಬಾ ನಿಖರತೆಯಿಂದ ಗಮನಿಸಿರುತ್ತೀರಿ, ಅಭ್ಯಸಿಸಿರುತ್ತೀರಿ. ಅಂದರೆ ಕರಾರುವಕ್ಕಾದ ಜ್ಞಾನ ಪಡೆಯಲು ನಿಖರತೆಯ ಅವಶ್ಯಕತೆಯಿದೆ. ಆ ನಿಖರತೆಯನ್ನು ಕಲಿಸುವುದಕ್ಕಾಗಿ ವಿಜ್ಞಾನ ಶಿಕ್ಷಣದ ಅವಶ್ಯಕತೆಯಿದೆ. ಹಾಗಾದರೆ ವಿಜ್ಞಾನ ಎಂದರೆ ನಮ್ಮ ಮಕ್ಕಳು ಪುಸ್ತಕ ಬಿಚ್ಚುವ ಮೊದಲೇ ಹೆದರಿಕೂರುತ್ತಾರಲ್ಲ ಆ ವಿಷಯವೇ, ಅಥವಾ ಹತ್ತನೇ ತರಗತಿಯಲ್ಲಿ ರಾತ್ರಿಯಿಡೀ ನಿದ್ದೆಬಿಟ್ಟು ಓದಿ ಅತೀ ಹೆಚ್ಚು ಅಂಕ ಪಡೆದವರೂ ಮಾತ್ರ ಪಿಯುಸಿಗೆಂದು ಆರಿಸಿಕೊಳ್ಳುತ್ತಾರಲ್ಲ ಆ ವಿಷಯವೇ ಎಂದು ನೀವೇನಾದರೂ ಯೋಚಿಸುತ್ತಿದ್ದರೆ, ನಿಮ್ಮ ಚಿಂತನೆಗಳು ದಾರಿತಪ್ಪಿವೆ ಎಂದರ್ಥ. ಏಕೆಂದರೆ ನಿಖರತೆ ಬರುವುದು ಪರೀಕ್ಷೆಗಳಿಂದಲ್ಲ; ಜ್ಞಾನದ ಹಸಿವಿನಿಂದ.
ತೀರಾ ಸರಳವಾಗಿ ಎಂದರೆ ವಿಜ್ಞಾನವನ್ನು ವಿಶೇಷವಾದ ಜ್ಞಾನ ಎಂದು ಅರ್ಥೈಸಬಹುದು. ಉದಾಹರಣೆಗೆ ಒಬ್ಬ ಬಸ್ ಚಾಲಕನಿಗೆ ಎಕ್ಸಿಲರೇಟರನ್ನು ಒತ್ತಿದ್ದರೆ ಬಸ್ ಜೋರಾಗಿ ಓಡುತ್ತದೆ ಎಂದು ಗೊತ್ತಿರುತ್ತದೆ – ಅದು ಜ್ಞಾನ, ಏಕ್ಸಿಲರೇಟರ್ ಒತ್ತಿದಾಗಲೇ ಅದೇಕೆ ಓಡುತ್ತದೆ ಎಂದು ತಿಳಿದುಕೊಂಡರೆ ಅದೇ ವಿಜ್ಞಾನ.ನಿಮಗೇ ಗೊತ್ತಿರುವುಂತೆ ಜ್ಞಾನವೇನೋ ಅನುಭವದಿಂದ ಬಂದುಬಿಡುತ್ತದೆ, ಹಾಗಾದರೆ ವಿಜ್ಞಾನ…… ?ಅದೂ ಅನುಭವದಿಂದಲೇ ಬರುತ್ತದೆಯಾದರೂ ಅದರೊಂದಿಗೆ ನಮ್ಮ ಮನೋಭಾವ ವೈಜ್ಞಾನಿಕವಾಗಿರಬೇಕು.
  
ವೈಜ್ಞಾನಿಕ ಮನೋಭಾವ ಎಂಬ ಪದಪಾರಿಭಾಷಿಕವಲ್ಲದಿದ್ದರೂ ಪುಸ್ತಕದ ಪರಿಬಾಷೆಯಿಂದ ಬಂದದ್ದು, ನಾಲಿಗೆ ಸ್ವಲ್ಪ ಹಿಡಿಯುತ್ತದೆ ಎನ್ನುವದನ್ನು ಬಿಟ್ಟರೆ ಅರ್ಥ ತುಂಬಾ ಸರಳ. ನಾನು ಒಂದು ಕಲ್ಲನ್ನು ಮೇಲಕ್ಕೆ ಎಸೆದಿದ್ದೇನೆ ನಂತರ ಅದು ಕೆಳಕ್ಕೇ ಬೀಳುತ್ತದೆ ಅದನ್ನ ನೀವು ನೊಡುತ್ತಿದ್ದೀರಿ ಈ ಸಂದರ್ಭದಲ್ಲಿ ನಿಮ್ಮ ಮನಸ್ಸಿನಲ್ಲಿ ಏನು ನಡೆಯುತ್ತಿರಬಹುದು ಎಂದು ಊಹಿಸಿಕೊಳ್ಳಿ. ಕೈಯಲ್ಲಿ ಕಲ್ಲು ಕಂಡೊಡನೆ ನೀವು ನಾನು ಮಾಡುವುದನ್ನೇ ನೋಡುತ್ತೀರಿ. ಕಂಡ ತಕ್ಷಣ ನಿಮ್ಮಲ್ಲಿ ಪ್ರಶ್ನೆಗಳು ಹುಟ್ಟುತೊಡಗುತ್ತವೆ – ಇವನು ಕಲ್ಲನ್ನು ಏಕೆ ತೆಗೆದುಕೊಂಡ? ಏಕೆ ಎಸೆದ? ಎಸೆದದ್ದು ಮೇಲಕ್ಕೇಕೆ ಹೊಯಿತು? ಹೋದದ್ದು ಮತ್ತೇಕೆ ಕೆಳಕ್ಕೆ ಬಂತು? ಹೀಗೆ ಮುಂತಾದವು. ಈಗ ನೀವೂ ಅದನ್ನೇ ಮಾಡಿ ನೋಡುತ್ತೀರಿ. ಆಗಲೂ ಹಾಗೆಯೇ ಆದರೆ ನಿಮ್ಮ ಮನಸ್ಸಿನಲ್ಲಿನ ಪ್ರಶ್ನೆಗಳಿಗೆ ನಿಮ್ಮ ಬಳಿಯೇ ಇರುವ ಮಾಹಿತಿಗಳಿಂದ ಉತ್ತರ ಹುಡುಕುವ ಹೆಣಗಾಟಕ್ಕೆ ಶುರುವಿಡುತ್ತೀರಿ.  ಹೊಸ ತರ್ಕಗಳನ್ನು ಲೆಕ್ಕಾಚಾರಗಳನ್ನು ಮಾಡಿ, ಗೊತ್ತಿದ್ದವರ ಬಳಿ ಕೇಳಿ, ಗೊತ್ತಿಲ್ಲದವರಿಗೆ ಬೈದು, ಸಿಕ್ಕ ಸಿಕ್ಕ ಪುಸ್ತಕ, ಲೇಖನ, ಸಿದ್ಧಾಂತಗಳನ್ನು ತಿರುವಿ ಉತ್ತರ ಹುಡುಕಿಕೊಳ್ಳುತ್ತೀರಿ. ಮುಂದೆ ಇದಕ್ಕೆ ಸಾಮಿಪ್ಯದ ಕ್ರಿಯೆಗಳಾದಾಗ ಈ ಉತ್ತರವನ್ನು ಅಲ್ಲಿ ಬಳಸುತ್ತೀರಿ ಎಂದಾದರೆ ನಿಮ್ಮ ಮನೋಭಾವನೆ ವೈಜ್ಞಾನಿಕವಾಗಿತ್ತೆಂದು ಅರ್ಥ. ನೀವು ಈಗ ಮಾಡಿದ ಕೆಲಸಗಳಾದ ಗಮನಿಸು, ಪ್ರಶ್ನಿಸು, ಚಿಂತಿಸು,ತರ್ಕಿಸು,ಅನುಕರಿಸು, ವಿಶ್ಲೇಷಿಸು, ಅಭ್ಯಸಿಸು ಹಾಗು ಅರ್ಥೈಸು ಇವುಗಳನ್ನೇ ವೈಜ್ಞಾನಿಕ ಚಿಂತನೆಯ ಹಂತಗಳು ಎಂದುಕರೆಯುವುದು.
ಈ ರೀತಿಯ ಕುತೂಹಲ, ವೈಜ್ಞಾನಿಕ ಮನೋಭಾವಗಳ ಸಮ್ಮಿಳಿತ ಫಲವೇ ವಿಜ್ಞಾನ. ನೆನಪಿಡಿ, ಇದೇ ಮನೋಭಾವನೆ ಇಂದು ನಮ್ಮನ್ನ ವಿಶ್ವದ ಅತೀ ಬುದ್ದಿವಂತ ಪ್ರಾಣಿಯನ್ನಾಗಿಸಿರುವುದು. ಇದೇ ಮನೋಭಾವನೆಯಿಂದಲೇ ಆದಿಮಾನವ ಚಕ್ರ, ಬೆಂಕಿಗಳನ್ನು ಕಂಡು ಹಿಡಿದದ್ದು, ಇದರಿಂದಲೇ ನಾವಿಂದು ಮಂಗಳನ ಅಂಗಳಕೆ ಲಗ್ಗೆ ಇಟ್ಟಿರುವುದು.
ವಿಜ್ಞಾನವನ್ನ ಹಲವಾರು ರೀತಿ ವಿಭಾಗಿಸಬಹುದಾದರೂ ಮೂಲ ವಿಜ್ಞಾನವನ್ನ ಪ್ರಮುಖವಾಗಿ ಭೌತ ವಿಜ್ಞಾನ (ಫಿಸಿಕ್ಸ್), ರಾಸಾಯನಿಕ ವಿಜ್ಞಾನ (ಕೆಮಿಸ್ಟ್ರಿ) ಹಾಗೂ ಜೀವ ವಿಜ್ಞಾನ (ಬಯಾಲಜಿ) ಎಂದು ವಿಂಗಡಿಸಬಹುದು. ಅದರಲ್ಲಿನಮ್ಮ ಭೌತವಿಜ್ಞಾನವು ವೈಜ್ಞಾನಿಕ ಮನೋಭಾವದಿಂದ ನಿಮ್ಮ ಸುತ್ತಲಿನ ನಿಸರ್ಗವನ್ನು, ಅದರಲ್ಲಿ ಭೌತಿಕವಾಗಿ ಕಂಡುಬರುವ ನೈಸರ್ಗಿಕ ಕ್ರಿಯೆಗಳನ್ನು, ಅವುಗಳಿಗೆ ಸಂಬಂದಪಟ್ಟ ಸಿದ್ಧಾಂತಗಳನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸುವ ವಿಜ್ಞಾನದ ಒಂದು ಅಂಗ. ನಿಸರ್ಗ ಎಂದು ಅರ್ಥ ನೀಡುವ ಗ್ರೀಕ್‌ನ ’ಫ್ಯೂಸಿಸ್’ ಎಂಬ ಪದದಿಂದ ಇಂಗ್ಲೀಷ್‌ನ ಫಿಸಿಕ್ಸ್ ಆಗಿದೆ. ೧೯ನೇ ಶತಮಾನಕ್ಕಿಂತ ಮುಂಚೆ ಇದನ್ನು ’ನೈಸರ್ಗಿಕ ತತ್ವಶಾಸ್ತ್ರ’ ಎಂದು ಕರೆಯಲಾಗುತಿತ್ತು. ಮಾನವನ ವಿಕಾಸದ ಮೊದಲ ಹೆಜ್ಜೆಯಲ್ಲೇ ಇದರ ಉಗಮವಾಗಿದ್ದರೂ, ಕ್ರಿ.ಪೂ ೬ನೇ ಶತಮಾನದಲ್ಲಿ ಗ್ರೀಕ್‌ನತತ್ವಶಾಸ್ತ್ರಜ್ಞರಲ್ಲಿ ಥೇಲ್ಸ್‌ಆಫ್ ಮಿಲೆಟಸ್ ಎಂಬಾತನೊಬ್ಬ ಅತಿಮಾನವ ಶಕ್ತಿ ಮತ್ತು ಮೂಢನಂಬಿಕೆಗಳ ವಿರುದ್ದ ತಿರುಗಿ ಬಿದ್ದು ನಿಸರ್ಗದಲ್ಲಿ ಪ್ರತಿಯೊಂದು ಕ್ರಿಯೆಯೂ ಕೆಲವೊಂದಷ್ಟು ನಿಯಮಗಳ ಪ್ರಕಾರವೇ ನಡೆಯುತ್ತದೆ ಇದರಲ್ಲಿ ಯಾವುದೇ ಅತೀಂದ್ರಿಯ ಶಕ್ತಿ ಇರಲು ಸಾಧ್ಯವಿಲ್ಲ ಎಂದು ಘೋಷಿಸಿದ್ದನ್ನೇ ನಿಜವಾದ ಭೌತಶಾಸ್ತ್ರದ ಮೊದಲ ಐತಿಹ್ಯ ಎನ್ನಲಾಗುತ್ತದೆ. ಪ್ರಾಯಶ: ಅದೇ ಸಮಯದಲ್ಲಿ ಭಾರತದ ಕಣಾದ ಎಂಬ ಋಷಿಯು ಅಣು/ಕಣಗಳಿಂದಲೇ ಎಲ್ಲಾ ವಸ್ತುಗಳು ರಚನೆಯಾಗಿವೆ ಎಂಬುದರ ಬಗ್ಗೆ ವಿವರಣೆ ನೀಡಿದ್ದಎಂದು ಕೆಲವು ಇತಿಹಾಸಕಾರರು ವಾದಿಸಿದ್ದನ್ನ ಕೇಳಿದ್ದೇನೆ. ಉಳಿದಂತೆ ಕೋಪರ್ನಿಕಸ್, ಗೆಲಿಲಿಯೋ, ಟಾಲೆಮಿ, ಕೆಪ್ಲರ್, ಥಾಮ್ಸನ್ ಮುಂತಾದಜಗತ್ತಿನ ಹಲವು ಜ್ಞಾನಿ, ವಿಜ್ಞಾನಿ, ತತ್ವಜ್ಞಾನಿಗಳೆಲ್ಲರೂ ತಮ್ಮ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರಾದರೂ ಗುರುತ್ವ ಎಂದಾಗ ನ್ಯೂಟನ್, ಸಾಪೇಕ್ಷ ಸಿದ್ದಾಂತ ಎಂದಾಗ ನೆನಪಾಗುವ ಐನಸ್ಟೈನ್ ಜನಮಾನಸಕ್ಕೆ ಸ್ವಲ್ಪ ಹತ್ತಿರವಾದವರು. ಇನ್ನು ಭಾರತದಲ್ಲಿ ಖಗೋಳಶಾಸ್ತ್ರದ ಸುಬ್ರಮಣ್ಯನ್ ಚಂದ್ರಶೇಖರ್ (ನೊಬೆಲ್ ೧೯೮೩) ಮತ್ತು ಮೇಘನಾದ್ ಸಾಹಾ, ರೇಡಿಯೋ ತರಂಗಗಳ ಜಗದೀಶ್ಚಂದ್ರ ಬೋಸ್, ಅಣುಶಕ್ತಿಯ ಹೋಮಿ ಜಹಾಂಗೀರ್ ಬಾಬಾ, ಕ್ಷಿಪಣಿ ತಂತ್ರಜ್ಞಾನದ ಎ.ಪಿ.ಜೆ.ಅಬ್ದುಲ್ ಕಲಾಂ ಮುಂತಾದವರು ತಮ್ಮ ಅತ್ಯಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ಇನ್ನು ಹೆಸರು ಕೇಳಿದೊಡನೆಯ ಪ್ರತಿಯೊಬ್ಬ ಭಾರತೀಯನ ರೋಮ ರೋಮಗಳು ನೆಟ್ಟಗಾಗುವ, ಸರ್.ಸಿ.ವಿ.ರಾಮನ್‌ರವರ ಕೊಡುಗೆ ಭಾರತೀಯ ಭೌತವಿಜ್ಞಾನಕ್ಕೆ ಅಪಾರ. ಇವರ ರಾಮನ್‌ಎಫೆಕ್ಟ್’ ಎಂಬ ವಿಷಯಕ್ಕೆ ೧೯೩೦ರಲ್ಲಿ ನೊಬೆಲ್ ಪ್ರಶಸ್ತಿ ದೊರಕಿದೆ. ಭಾರತದ ಭೌತವಿಜ್ಞಾನಕ್ಷೇತ್ರಕ್ಕೆ ಸಂದ ಮೊಟ್ಟ ಮೊದಲ ನೊಬೆಲ್ ಅದಾಗಿತ್ತು. ತೀರಾ ಇತ್ತೀಚಿಗೆ ಸದ್ದು ಮಾಡುತ್ತಿರುವ ’ಹಿಗ್ಸ್-ಬೋಸಾನ್’ನಲ್ಲಿರುವ’ ಬೋಸಾನ್’ಎಂಬ ಪದ ಎಲ್ಲಿಂದ ಬಂತು ಗೊತ್ತೇ ? ೧೯೯೦ರ ಆಸುಪಾಸಿನ ’ಬೋಸ್-ಐನ್‌ಸ್ಟೈನ್ ಸ್ಟಾಟಿಸ್ಟಿಕ್ಸ್’ನಲ್ಲಿ ಐನ್‌ಸ್ಟೈನ್ ಜೊತೆ ಕೈ ಜೋಡಿಸಿದ್ದ ನಮ್ಮ ಸತ್ಯೇಂದ್ರನಾಥ ಬೋಸ್ ಅವರಿಂದ. ಇವರೆಲ್ಲರುಗಳಿಂದಾಗಿ ಯಾವುದೇ ಮಿತಿ, ಎಲ್ಲೆಗಳಿಲ್ಲದೆ ಭೌತಶಾಸ್ತ್ರ ಬೆಳೆಯುತ್ತಿದೆ ಎನ್ನುವುದಂತೂ ಸೂರ್‍ಯಚಂದ್ರರಷ್ಟೇ ಸತ್ಯ.
ಈ ಅಗಾಧ ವಿಷಯದ ಎಲ್ಲಾ ಮಜಲುಗಳೂ ಜನಸಾಮಾನ್ಯರಿಗೆ ಅರ್ಥವಾಗಲಾರವು, ಆದರೂ ಕೆಲ ಪ್ರಾಥಮಿಕ ಅಂಶಗಳು ನಮ್ಮ ಜೀವನದ ಭಾಗಗಳೇ ಆಗಿರುವುದರಿಂದ ಅವುಗಳಲ್ಲಡಗಿರುವ ಭೌತಶಾಸ್ತ್ರವನ್ನು ನನ್ನ ಜ್ಞಾನದ ನಿಲುಕಿನಲ್ಲಿ ಸಾಧ್ಯವಿದ್ದಷ್ಟು ಸರಳವಾಗಿ ನಿಮ್ಮ ಮುಂದಿಡುವ ಪ್ರಯತ್ನದಲ್ಲಿ. . .